ನವದೆಹಲಿ:ಬಹುಬೇಡಿಕೆಯಲ್ಲಿರುವ 5ಜಿ ಅಂತರ್ಜಾಲ ತರಂಗಾಂತರಗಳನ್ನು ರಿಲಯನ್ಸ್ ಜಿಯೋ ಕಂಪನಿ ವಿಸ್ತರಿಸುತ್ತಿದೆ. ಡಿಸೆಂಬರ್ ವೇಳೆಗೆ ದೇಶಾದ್ಯಂತ 5ಜಿ ಇಂಟರ್ನೆಟ್ ಲಭ್ಯವಾಗಲಿದೆ. ಗಣೇಶ ಚತುರ್ಥಿ ದಿನ ಜಿಯೋ ಏರ್ ಫೈಬರ್ ಆರಂಭಿಸಲಾಗುವುದು ಎಂದು ಭಾರತದ ಶ್ರೀಮಂತ ಉದ್ಯಮಿ, ಜಿಯೋ ಕಂಪನಿಯ ಅಧ್ಯಕ್ಷ ಮುಖೇಶ್ ಅಂಬಾನಿ ಇಂದು (ಸೋಮವಾರ) ತಿಳಿಸಿದರು.
ಸದ್ಯಕ್ಕೆ ಕೆಲವು ನಗರಗಳಿಗೆ ಮಾತ್ರ ಸೀಮಿತವಾಗಿರುವ ಜಿಯೋ 5ಜಿ ಇಂಟರ್ನೆಟ್ ವಿಸ್ತರಿಸುವ ಕಾರ್ಯ ಅತಿವೇಗವಾಗಿ ಸಾಗುತ್ತಿದೆ. ವರ್ಷಾಂತ್ಯದಲ್ಲಿ ಇದನ್ನು ಇಡೀ ದೇಶದ ಬಳಕೆದಾರರಿಗೆ ತಲುಪುವಂತೆ ಮಾಡಲಾಗುತ್ತದೆ. ಸೆಪ್ಟೆಂಬರ್ 19 ರಂದು ಜಿಯೋ ಏರ್ ಫೈಬರ್ ಕೂಡ ಲಾಂಚ್ ಆಗಲಿದೆ ಎಂದರು.
ದೇಶದಲ್ಲಿ ಜಿಯೋ ಗ್ರಾಹಕರ ಸಂಖ್ಯೆ 450 ಮಿಲಿಯನ್ ದಾಟಿದೆ. 5ಜಿ ನೆಟ್‌ವರ್ಕ್ 96 ಪ್ರತಿಶತ ನಗರಪ್ರದೇಶಗಳನ್ನು ಒಳಗೊಂಡಿದೆ. ನೆಟ್‌ವರ್ಕ್ ಬಳಕೆದಾರರ ಸಂಖ್ಯೆಯಲ್ಲೂ ಏರಿಕೆ ಕಂಡಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 20ಕ್ಕಿಂತ ಹೆಚ್ಚಿನ ಆದಾಯ ತರುತ್ತಿದೆ ಎಂದು ಮಾಹಿತಿ ನೀಡಿದರು.
ಒಬ್ಬ ಗ್ರಾಹಕನಿಂದ ತಿಂಗಳಿಗೆ 25 ಜಿಬಿ ಬಳಕೆ:ಜಿಯೋ ನೆಟ್‌ವರ್ಕ್‌ನ ಪ್ರತಿ ಗ್ರಾಹಕರ ಡೇಟಾ ಬಳಕೆಯೂ ಹೆಚ್ಚಿದೆ. ಒಬ್ಬ ಗ್ರಾಹಕ ಈಗ ಪ್ರತಿ ತಿಂಗಳಿಗೆ 25 ಜಿಬಿಯಷ್ಟು ಇಂಟರ್ನೆಟ್ ಬಳಸುತ್ತಿದ್ದಾರೆ. ಭಾರತವನ್ನು ಪ್ರೀಮಿಯರ್ ಡಿಜಿಟಲ್ ಸೊಸೈಟಿಯನ್ನಾಗಿ ಪರಿವರ್ತಿಸುವ ಉದ್ದೇಶದಿಂದ 7 ವರ್ಷಗಳ ಹಿಂದೆ ಜಿಯೋ ಪ್ರಾರಂಭಿಸಲಾಯಿತು. ಇಡೀ ಜಗತ್ತು ಮೆಚ್ಚುವ ಹಾಗೆ ಡಿಜಿಟಲ್ ಸೌಲಭ್ಯವನ್ನು ನೀಡುವಲ್ಲಿ ನಮ್ಮ ಹೃದಯ ಮತ್ತು ಆತ್ಮವನ್ನು ಹೂಡಿಕೆ ಮಾಡಿದ್ದೇವೆ ಎಂದು ಅಂಬಾನಿ ವಿವರ ನೀಡಿದರು.
ಜಿಯೋ ನವ ಭಾರತದ ಅದ್ಭುತ ಡಿಜಿಟಲ್ ರೂಪಾಂತರವಾಗಿದೆ. ಈಗ ನಮ್ಮ ಮಹತ್ವಾಕಾಂಕ್ಷೆಗಳ ಮೇರೆ ಮೀರಿದೆ. ಕಳೆದ ಅಕ್ಟೋಬರ್‌ನಲ್ಲಿ ಜಿಯೋ 5ಜಿ ಆರಂಭಿಸಿದ್ದೆವು. ಕೇವಲ ಒಂಬತ್ತು ತಿಂಗಳಲ್ಲಿ ದೇಶದ ಶೇಕಡಾ 96 ರಷ್ಟು ಪಟ್ಟಣ ಪ್ರದೇಶಗಳಲ್ಲಿ ನೆಟ್‌ವರ್ಕ್ ತಲುಪಿಸಿದ್ದೇವೆ. ಇದು ಬೇರಾವ ನೆಟ್ವರ್ಕ್ಗಳಿಗಿಂತಲೂ ಅಧಿಕ ಎಂದರು.
ಈ ವರ್ಷದ ಡಿಸೆಂಬರ್ ವೇಳೆಗೆ ಜಿಯೋ ಇಡೀ ದೇಶವನ್ನು ವಿಸ್ತರಿಸುವ ಹಾದಿಯಲ್ಲಿದ್ದು, 50 ಮಿಲಿಯನ್‌ಗಿಂತಲೂ ಹೆಚ್ಚು 5ಜಿ ಗ್ರಾಹಕರನ್ನು ಜಿಯೋ ಹೊಂದಿದೆ. ಈ ಮೂಲಕ ದೇಶದಲ್ಲಿಯೇ ಅತ್ಯಧಿಕ 5ಜಿ ನೆಟ್‌ವರ್ಕ್ ಬಳಕೆದಾರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದೇವೆ. ಗ್ರಾಹಕರು ಕೂಡ ಜಿಯೋವನ್ನು ತಮ್ಮ ಆದ್ಯತೆಯ ನೆಟ್‌ವರ್ಕ್ ಆಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಂಬಾನಿ ಹೇಳಿದರು.
ಇದನ್ನೂ ಓದಿ:Reliance: ರಿಲಯನ್ಸ್ ಮಂಡಳಿಗೆ ಅಂಬಾನಿ ಪುತ್ರರ ನೇಮಕ.. ಕಂಪನಿಯ ಅಧಿಕಾರ ಹಸ್ತಾಂತರಕ್ಕೆ ಉದ್ಯಮಿ ಮುಖೇಶ್ ಸಜ್ಜು?