ವಾಷಿಂಗ್ಟನ್:ಅಮೆರಿಕ ಮೂಲದ ಹಣಕಾಸು ಸೇವೆಗಳು ಮತ್ತು ಮೊಬೈಲ್ ಬ್ಯಾಂಕಿಂಗ್ ಕಂಪನಿ ಬ್ಲಾಕ್ ವಿರುದ್ಧ ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿರುವ ಗಂಭೀರ ಆರೋಪಗಳ ಬೆನ್ನಲ್ಲೇ ಆ ಕಂಪನಿಯ ಸಂಸ್ಥಾಪಕ ಜಾಕ್ ಡಾರ್ಸಿ ಅವರ ಸಂಪತ್ತು ಗಣನೀಯವಾಗಿ ಕುಸಿದಿದೆ. ಹಿಂಡೆನ್‌ಬರ್ಗ್ ವರದಿ ಬಿಡುಗಡೆಯಾದ ನಂತರ ಡಾರ್ಸಿ ಹೊಂದಿದ್ದ ಸಂಪತ್ತಿನಲ್ಲಿ 526 ಮಿಲಿಯನ್ ಡಾಲರ್ (ಸುಮಾರು 4,327 ಕೋಟಿ ರೂ.) ಕುಸಿದಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಶೇ 11ರಷ್ಟು ಸಂಪತ್ತು ಕರಗಿದ್ದು 4.4 ಶತಕೋಟಿ ಡಾಲರ್‌ಗಳಿಗೆ ತಲುಪಿದೆ.
ಗುರುವಾರದ ವ್ಯವಹಾರದಲ್ಲಿ ಒಂದು ಹಂತದ ವೇಳೆಗೆ ಬ್ಲಾಕ್ ಕಂಪನಿಯ ಷೇರುಗಳ ಮೌಲ್ಯ ಶೇ.22ರಷ್ಟು ನಷ್ಟ ಅನುಭವಿಸಿದೆ. ಅಂತಿಮವಾಗಿ ಶೇ 15ರಷ್ಟು ನಷ್ಟದೊಂದಿಗೆ ಚೇತರಿಸಿಕೆ ಕಂಡಿವೆ. ಟ್ವಿಟರ್ ಸಹ-ಸಂಸ್ಥಾಪಕರೂ ಆಗಿರುವ ಡಾರ್ಸಿ ಸಂಪತ್ತು ಬ್ಲಾಕ್ ಷೇರುಗಳೊಂದಿಗೆ ಸಂಬಂಧ ಹೊಂದಿದೆ. ಇವರಲ್ಲಿರುವ 4.4 ಶತಕೋಟಿ ಡಾಲರ್ ಸಂಪತ್ತಿನಲ್ಲಿ ಬ್ಲಾಕ್ ಷೇರುಗಳ ಪಾಲು 3 ಬಿಲಿಯನ್ ಡಾಲರ್‌ಗಳಷ್ಟು ಎಂದು ಅಂದಾಜಿಸಲಾಗಿದೆ. ಟ್ವಿಟರ್‌ನಲ್ಲಿ $388 ಮಿಲಿಯನ್ ಮೌಲ್ಯದ ಷೇರುಗಳನ್ನು ಡಾರ್ಸಿ ಹೊಂದಿದ್ದಾರೆ.
ಹಿಂಡೆನ್‌ಬರ್ಗ್ ರಿಸರ್ಚ್ 'ಬ್ಲಾಕ್' (ಹಿಂದೆ ಸ್ಕ್ವೇರ್ ಎಂದು ಕರೆಯಲಾಗುತಿತ್ತು) ವಿರುದ್ಧ ಭಾರಿ ಪ್ರಮಾಣದ ಅಕ್ರಮಗಳ ಆರೋಪ ಮಾಡಿದ್ದಾರೆ. ಕಂಪನಿಯ ಸಂಸ್ಥಾಪಕರ ಜೊತೆಗೆ ಮುಖ್ಯ ಹಣಕಾಸು ಅಧಿಕಾರಿ ಅಮೃತಾ ಅಹುಜಾ ಮತ್ತು ಮ್ಯಾನೇಜರ್ ಬ್ರೈನ್ ಗ್ರಾಸಾಡೋನಿಯಾ ಕೂಡ ಕಂಪನಿಯ ಷೇರುಗಳಲ್ಲಿ ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ ಎಂದು ಹಿಂಡೆನ್‌ಬರ್ಗ್ ವರದಿ ಹೇಳಿದೆ. ಬ್ಲಾಕ್ ಮ್ಯಾನೇಜರ್‌ಗಳು ಗ್ರಾಹಕರ ಸಂಖ್ಯೆಯನ್ನು ಅಧಿಕಗೊಳಿಸಿ ಕಂಪನಿಯ ಷೇರು ಮೌಲ್ಯವನ್ನು ಕೃತಕವಾಗಿ ಏರಿಸುವ ಮೂಲಕ ಹೂಡಿಕೆದಾರರು ಮತ್ತು ಸರ್ಕಾರವನ್ನು ವಂಚಿಸಿದ್ದಾರೆ ಎಂದು ವರದಿ ಆರೋಪಿಸಿದೆ.
ಕೊರೊನಾ ಅವಧಿಯಲ್ಲಿ ಕಂಪನಿಯ ಸಂಸ್ಥಾಪಕರು ಸುಮಾರು 100 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಂಪನಿಯಲ್ಲಿನ 40 ರಿಂದ 75 ಪ್ರತಿಶತದಷ್ಟು ಖಾತೆಗಳು ನಕಲಿ. ಬ್ಲಾಕ್‌ನ ಹೆಚ್ಚಿನ ಬಳಕೆದಾರರು ಅಪರಾಧಿಗಳು ಮತ್ತು ಅಕ್ರಮ ವ್ಯವಹಾರಗಳನ್ನು ನಡೆಸುವವರು ಎಂದು ಕಂಪನಿಯ ಮಾಜಿ ಉದ್ಯೋಗಿಗಳು ಬಹಿರಂಗಪಡಿಸಿದ್ದಾರೆ ಎಂದೂ ಹಿಂಡೆನ್‌ಬರ್ಗ್ ದೂರಿದೆ.
ಇತರೆ ಆರೋಪಗಳು: ಬ್ಲಾಕ್ ಸಂಸ್ಥೆಯು ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ತೋರಿಸುವುದರ ಜೊತೆಗೆ ವೆಚ್ಚದ ವಿವರ ಕಡಿಮೆ ಮಾಡಿ ಹೂಡಿಕೆದಾರರ ದಾರಿ ತಪ್ಪಿಸಿದೆ. ಬ್ಲಾಕ್ ನಿಯಮಿತವಾಗಿ ಹೂಡಿಕೆದಾರರಿಂದ ಸಹಾಯ ಪಡೆಯುತ್ತಿತ್ತು. ಹೊಸತನದ ಹೆಸರಿನಲ್ಲಿ ಗ್ರಾಹಕರು ಮತ್ತು ಸರ್ಕಾರವನ್ನು ಸುಲಭವಾಗಿ ಮೋಸ ಮಾಡುವುದು ಬ್ಲಾಕ್ ವ್ಯಾಪಾರದ ಹಿಂದಿನ ನಿಜವಾದ ಉದ್ದೇಶ. ನಿಯಮಾವಳಿ ಉಲ್ಲಂಘಿಸುವುದು, ಸಾಲದ ಹೆಸರಿನಲ್ಲಿ ದುರ್ಬಳಕೆ, ಕ್ರಾಂತಿಕಾರಿ ತಂತ್ರಜ್ಞಾನದ ಹೆಸರಿನಲ್ಲಿ ಕಂಪನಿಯ ಅಂಕಿಅಂಶಗಳನ್ನು ಕೃತಕವಾಗಿ ಹೆಚ್ಚಿಸುವುದು ಮತ್ತು ಹೂಡಿಕೆದಾರರನ್ನು ದಾರಿ ತಪ್ಪಿಸುವುದು ಬ್ಲಾಕ್ ವ್ಯವಹಾರದ ಗುರಿಯಾಗಿದೆ ಎಂದು ಹಿಂಡೆನ್‌ಬರ್ಗ್ ಆರೋಪಿಸಿದೆ.
ಭಾರತದ ಅದಾನಿ ಗ್ರೂಪ್ ಬಗ್ಗೆ ಜನವರಿ 24 ರಂದು ಇದೇ ಹಿಂಡೆನ್‌ಬರ್ಗ್ ರಿಸರ್ಚ್ ಬಿಡುಗಡೆ ಮಾಡಿದ ವರದಿಯಿಂದಾಗಿ ಕಂಪನಿಯ ಮಾರುಕಟ್ಟೆ ಮೌಲ್ಯವು 140 ಶತಕೋಟಿ ಡಾಲರ್‌ಗಿಂತ ಹೆಚ್ಚು ಕುಸಿದಿತ್ತು. ಸೆಪ್ಟೆಂಬರ್ 2020ರಲ್ಲಿ, ಎಲೆಕ್ಟ್ರಿಕ್ ವಾಹನ ತಯಾರಕ ನಿಕೋಲಾ ಕಾರ್ಪ್‌ನ ವರದಿಯು ಹೊರಬಂದಾಗ, ಕಂಪನಿಯ ಷೇರುಗಳು ಕುಸಿಯಿತು. ಆ ಕಂಪನಿಯ ಸಂಸ್ಥಾಪಕ ಟ್ರೆವರ್ ಮಿಲ್ಟನ್ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅಕ್ಟೋಬರ್‌ನಲ್ಲಿ ಹೂಡಿಕೆದಾರರನ್ನು ವಂಚಿಸಿದ ಆರೋಪದಲ್ಲಿ ಅವರು ತಪ್ಪಿತಸ್ಥರು ಎಂದು ಕಂಡುಬಂದಿದೆ.
ಇದನ್ನೂ ಓದಿ:ಟ್ಯೂಷನ್ ಟೀಚರ್: ನೂರಾರು ಕೋಟಿ ರೂಪಾಯಿ ವ್ಯವಹಾರ!