ನವದೆಹಲಿ: ಐಟಿಆರ್ ಸಲ್ಲಿಕೆಗೆ ಇನ್ನು ಕೆಲವೇ ಗಂಟೆಗಳು ಮಾತ್ರ ಉಳಿದಿವೆ. ಈ ವರ್ಷ ಐಟಿಆರ್ ಫೈಲಿಂಗ್ನ ನಿಗದಿತ ಕೊನೆಯ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ತೆರಿಗೆದಾರರು ನಿಗದಿತ ದಿನಾಂಕದ ವಿಸ್ತರಣೆಗಾಗಿ ಕಾಯುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ತಿಳಿದು ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರು ತಮ್ಮ ರಿಟರ್ನ್ಸ್ ಸಲ್ಲಿಸಲು ಮುಗಿ ಬೀಳುತ್ತಿದ್ದಾರೆ. ಇಂದು (ಜುಲೈ 31) ಕೊನೆಗೊಳ್ಳುವ ಗಡುವಿನ ದಿನವಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಸಂಖ್ಯೆಯ ರಿಟರ್ನ್‌ಗಳನ್ನು ಸಲ್ಲಿಸಲಾಗುತ್ತಿದೆ. ಸೋಮವಾರ ಮಧ್ಯಾಹ್ನ 12 ರಿಂದ 1 ಗಂಟೆಯ ಅವಧಿಯಲ್ಲಿ 3.39 ಲಕ್ಷ ಮಂದಿ ಏಕಕಾಲದಲ್ಲಿ ರಿಟರ್ನ್ಸ್ ಸಲ್ಲಿಸಿದ್ದಾರೆ ಎಂದು ಐಟಿ ಇಲಾಖೆ ತಿಳಿಸಿದೆ.
ಇಂದು ಮಧ್ಯಾಹ್ನ 1 ಗಂಟೆಯವರೆಗೆ 11.03 ಲಕ್ಷ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ಟ್ವೀಟ್ ಮಾಡಿದೆ. ಐಟಿಆರ್ ಸಲ್ಲಿಸಲು ಯಾವುದೇ ತೊಂದರೆ ಇದ್ದಲ್ಲಿ, orm@cpc.incometax.gov.in ಗೆ ಮೇಲ್ ಮಾಡಲು ಸೂಚಿಸಲಾಗಿದೆ. ಇನ್ನೊಂದೆಡೆ ರಿಟರ್ನ್ಸ್ ಸಲ್ಲಿಕೆಗೆ ಕೊನೆಯ ದಿನವಾಗಿರುವುದರಿಂದ ಟ್ವಿಟರ್ನಲ್ಲಿ ಬೆಳಗ್ಗೆಯಿಂದಲೇ #IncomeTaxReturn ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ನಲ್ಲಿದೆ.
ಈ ಹ್ಯಾಶ್‌ಟ್ಯಾಗ್‌ನೊಂದಿಗೆ ಗಡುವನ್ನು ವಿಸ್ತರಿಸುವಂತೆ ಕೆಲವರು ಐಟಿ ಇಲಾಖೆಗೆ ಮನವಿ ಮಾಡುತ್ತಿದ್ದಾರೆ. ಮಳೆಯಿಂದಾಗಿ ಕೆಲವರಿಗೆ ವಾಪಸು ಬರಲು ತೊಂದರೆಯಾಗುತ್ತಿದೆ ಎಂಬ ಸುದ್ದಿ ಇದ್ದರೂ ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮತ್ತೊಂದೆಡೆ, ಕೆಲವರು ಈ ಹ್ಯಾಷ್‌ಟ್ಯಾಗ್ ವೇದಿಕೆಯ ಮೂಲಕ ತಮ್ಮ ತಾಂತ್ರಿಕ ಸಮಸ್ಯೆಗಳನ್ನು ಐಟಿ ಇಲಾಖೆಯ ಗಮನಕ್ಕೆ ತರುತ್ತಿದ್ದಾರೆ. ಇನ್ನೂ ಕೆಲವರು ಕೊನೆ ದಿನ ತೆರಿಗೆದಾರರ ಪರಿಸ್ಥಿತಿ ಹೀಗೆ ಎಂದು ಮೀಮ್ ಕ್ರಿಯೇಟ್ ಮಾಡುತ್ತಿದ್ದಾರೆ.
ಗಡುವಿನೊಳಗೆ ರಿಟರ್ನ್ಸ್ ಸಲ್ಲಿಸದಿದ್ದರೆ ದಂಡದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆ 1961, ಸೆಕ್ಷನ್ 234F ರೂ.1,000 ಆದಾಯ ರೂ.5 ಲಕ್ಷಕ್ಕಿಂತ ಕಡಿಮೆ ಇರುವವರಿಗೆ; ಅದಕ್ಕಿಂತ ಮೇಲ್ಪಟ್ಟು ರೂ.5,000 ಶುಲ್ಕ ಅನ್ವಯವಾಗುತ್ತದೆ. ತೆರಿಗೆ ಕಟ್ಟಬೇಕಾದವರು.. ತಿಂಗಳಿಗೆ ಶೇ.1ರಷ್ಟು ಸರಳ ಬಡ್ಡಿ ಕಟ್ಟಬೇಕು. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದಿದ್ದರೆ ಐಟಿ ಇಲಾಖೆ ನೋಟಿಸ್ ಕಳುಹಿಸುತ್ತದೆ.