ನವದೆಹಲಿ : ಪ್ರಸ್ತುತ ವರ್ಷ ನಡೆಯುತ್ತಿರುವ ಐಪಿಎಲ್ 2023 ಕ್ರಿಕೆಟ್ ಪಂದ್ಯಾವಳಿಯ ಋತುವಿನಲ್ಲಿ ಫ್ಯಾಂಟಸಿ ಕ್ರೀಡಾ ವಲಯದ (Fantasy sports) ಆದಾಯವು ಶೇಕಡಾ 30 ರಿಂದ 35 ರಷ್ಟು ಅಂದರೆ 2,900 ರಿಂದ 3,100 ಕೋಟಿ ವರೆಗೆ ಬೆಳೆಯುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ರೆಡ್‌ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ ಬುಧವಾರ ಹೇಳಿದೆ. ಅಂಕಿಅಂಶಗಳ ಪ್ರಕಾರ 6.5 ರಿಂದ 7 ಕೋಟಿ ಬಳಕೆದಾರರು ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ವಹಿವಾಟು ನಡೆಸುವ ನಿರೀಕ್ಷೆಯಿದೆ. ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಜನರಲ್ಲಿ ಇತ್ತೀಚೆಗೆ ಹೆಚ್ಚಿನ ಜಾಗೃತಿ ಮೂಡಿದೆ ಹಾಗೂ ಅವರು ಇದಕ್ಕಾಗಿ ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ ಎಂದು ರೆಡ್‌ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ ಪಾಲುದಾರ ಉಜ್ವಲ್ ಚೌಧರಿ ಹೇಳಿದರು.
ನಾವು ಈಗ ಪ್ರಚಾರದಲ್ಲಿ ಬಾಲಿವುಡ್ ತಾರೆಯರನ್ನು ನೋಡುತ್ತಿದ್ದೇವೆ. ಕಾನೂನು ಚೌಕಟ್ಟು ಮತ್ತು ಜಿಎಸ್‌ಟಿ ಕುರಿತಾಗಿ ಈಗ ಉತ್ತಮ ಸ್ಪಷ್ಟತೆ ಇದೆ. ಗೂಗಲ್‌ನಿಂದ ಮತ್ತೊಂದು ಸಕಾರಾತ್ಮಕ ನಿಲುವು ತಳೆಯಲಾಗಿದೆ. ಅಲ್ಲಿ ಅದು ತನ್ನ ಪ್ರಾಯೋಗಿಕ ಕಾರ್ಯಕ್ರಮದ ಅಡಿಯಲ್ಲಿ ಪ್ಲೇಸ್ಟೋರ್‌ನಲ್ಲಿ ಕೆಲವು ಫ್ಯಾಂಟಸಿ ಪ್ಲಾಟ್‌ಫಾರ್ಮ್‌ಗಳಿಗೆ ಅನುಮತಿ ನಿಡಿದೆ. ಇವೆಲ್ಲವೂ ತುಂಬಾ ಸಕಾರಾತ್ಮಕ ಬೆಳವಣಿಗೆಗಳಾಗಿವೆ. ಈ ಎಲ್ಲದರೊಂದಿಗೆ ಭಾರತದಲ್ಲಿ ಫ್ಯಾಂಟಸಿ ಕ್ರೀಡೆಗಳ ಬಳಕೆದಾರರ ವಹಿವಾಟಿನಲ್ಲಿ ಶೇಕಡಾ 20 ರಿಂದ 30 ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದರು.
ಗೂಗಲ್ ತನ್ನ ಪ್ರಾಯೋಗಿಕ ಕಾರ್ಯಕ್ರಮದ ಅಡಿಯಲ್ಲಿ ಆಯ್ದ ಫ್ಯಾಂಟಸಿ ಕ್ರೀಡೆಗಳ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್ನಲ್ಲಿ ಹಾಕಲು ಅನುಮತಿ ನಿಡಿದೆ. ಮುಖ್ಯವಾಗಿ ಡ್ರೀಮ್ 11, ಗೇಮ್ಸ್ 24X7 ನ My11Circle, MPL ರಮ್ಮಿ ಮತ್ತು ಫ್ಯಾಂಟಸಿ ಕ್ರಿಕೆಟ್ ಮುಂತಾದ ದೊಡ್ಡ ಕಂಪನಿಗಳ ಆ್ಯಪ್ಗಳು ಈಗ ಪ್ಲೇ ಸ್ಟೋರ್ನಲ್ಲಿವೆ ಎಂದರು. ಪ್ರಸ್ತುತ ಐಪಿಎಲ್ ಋತುವಿನಲ್ಲಿ ಫ್ಯಾಂಟಸಿ ಕ್ರೀಡೆಗಳ ಒಟ್ಟು ಗೇಮಿಂಗ್ ಆದಾಯವು ರೂ. 2,900-ರೂ. 3,100 ಕೋಟಿಗೆ ತಲುಪುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು ಭಾರತದಲ್ಲಿನ ಎಲ್ಲಾ ಫ್ಯಾಂಟಸಿ ಕ್ರಿಕೆಟ್ ವೇದಿಕೆಗಳನ್ನು ಒಳಗೊಂಡಿದೆ. ಕಳೆದ ವರ್ಷ ಐಪಿಎಲ್ ಋತುವಿಗೆ ಹೋಲಿಸಿದರೆ ಇದು ಸುಮಾರು 30 ರಿಂದ 35 ಶೇಕಡಾ ಹೆಚ್ಚಾಗಿದೆ ಎಂದು ಚೌಧರಿ ಹೇಳಿದರು.