ನವದೆಹಲಿ:ಸರ್ಕಾರಿ ಒಡೆತನದ ಸಂಸ್ಥೆಗಳು ಮತ್ತು ಕಚೇರಿಗಳ ಉದ್ಯೋಗಿಗಳು ಐಫೋನ್ಗಳನ್ನು ಬಳಸದಂತೆ ಚೀನಾ ನಿಷೇಧ ಹೇರಿದ ನಂತರ ಅಮೆರಿಕದ ಷೇರು ಮಾರುಕಟ್ಟೆಗಳಲ್ಲಿ ಐಫೋನ್ ತಯಾರಿಕಾ ಕಂಪನಿ ಆ್ಯಪಲ್ ಇಂಕ್ ಷೇರುಗಳು ಸೆಪ್ಟೆಂಬರ್ 7 ರಂದು ತೀವ್ರವಾಗಿ ಕುಸಿದಿವೆ ಮತ್ತು ಕೇವಲ ಎರಡು ದಿನಗಳಲ್ಲಿ 200 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಮುಖ ಯುಎಸ್ ಈಕ್ವಿಟಿ ಸೂಚ್ಯಂಕಗಳಲ್ಲಿ, ಆ್ಯಪಲ್ ಅತಿದೊಡ್ಡ ಕಂಪನಿಯಾಗಿದೆ. ಆದರೆ, ಚೀನಾದಲ್ಲಿ ಎದುರಾದ ಸಮಸ್ಯೆಗಳ ಕಾರಣದಿಂದ ಆ್ಯಪಲ್ ಷೇರುಗಳ ಮಾರಾಟಕ್ಕೆ ಹೂಡಿಕೆದಾರರು ಮುಂದಾಗಿದ್ದಾರೆ. ಚೀನಾ ಆ್ಯಪಲ್ನ ಅತಿದೊಡ್ಡ ಮಾರುಕಟ್ಟೆ ಹಾಗೂ ಉತ್ಪಾದನಾ ನೆಲೆಯೂ ಆಗಿರುವುದು ಗಮನಾರ್ಹ.
ಆದಾಗ್ಯೂ ಸರ್ಕಾರಿ ಉದ್ಯೋಗಿಗಳು ಆ್ಯಪಲ್ ಫೋನ್ ಬಳಸದಂತೆ ಚೀನಾ ಬಹಿರಂಗವಾಗಿ ಪ್ರಕಟಣೆ ಹೊರಡಿಸಿಲ್ಲ. ಆದರೆ, ಅಮೆರಿಕ ಮತ್ತು ಚೀನಾ ನಡುವಿನ ಅಂತಾರಾಷ್ಟ್ರೀಯ ತಿಕ್ಕಾಟದ ಮಧ್ಯೆ ಐಫೋನ್ಗಳನ್ನು ಹ್ಯಾಕ್ ಮಾಡಿ ಅಮೆರಿಕ ತನ್ನ ವಿರುದ್ಧ ಬೇಹುಗಾರಿಕೆ ನಡೆಸಬಹುದು ಎಂಬ ಸಂಶಯ ಚೀನಾಕ್ಕಿದೆ ಎಂದು ವರದಿಗಳು ತಿಳಿಸಿವೆ.
ಐಫೋನ್ಗಳನ್ನು ಕಚೇರಿಗೆ ತರದಂತೆ ಅಥವಾ ಕೆಲಸಕ್ಕಾಗಿ ಬಳಸದಂತೆ ಚೀನಾ ಕೇಂದ್ರ ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳಿಗೆ ಆದೇಶಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಬುಧವಾರ ವರದಿ ಮಾಡಿದೆ. ನಿಷೇಧಗಳು ಎಷ್ಟು ವ್ಯಾಪಕವಾಗಿವೆ ಎಂಬುದು ಸ್ಪಷ್ಟವಾಗಿಲ್ಲ. ಈ ನಿಷೇಧವು ಇತರ ರಾಜ್ಯಗಳ ಕಂಪನಿಗಳು ಮತ್ತು ಸರ್ಕಾರಿ ಒಡೆತನದ ಸಂಸ್ಥೆಗಳಿಗೆ ವಿಸ್ತರಿಸಬಹುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ.