ಹೈದರಾಬಾದ್:ದುಡಿದ ಹಣವನ್ನು ಉಳಿತಾಯ ಮಾಡುವುದು ಎಷ್ಟು ಮುಖ್ಯ ಎಂಬುದು ಈಗಿನ ಆರ್ಥಿಕ ಹಿಂಜರಿತದಿಂದ ನಮಗೆ ಅರಿವಾಗುತ್ತದೆ. ಉಳಿತಾಯ ಮಾಡಿದ ಹಣ ನಮ್ಮ ಮುಪ್ಪಿನ ಮತ್ತು ಕಷ್ಟ ಕಾಲಕ್ಕೆ ನೆರವಾಗುತ್ತದೆ. ಉಳಿತಾಯ ನಿಯಮ ಪಾಲಿಸಿದಲ್ಲಿ ಜೀವನಮಟ್ಟ ಸುಧಾರಿಸುತ್ತದೆ ಮತ್ತು ಜೀವನದ ಎಲ್ಲ ಹಂತಗಳಲ್ಲಿ ಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು.
ಆರ್ಥಿಕ ಸದೃಢತೆ ಸಾಧಿಸಲು ಪ್ರತಿ ಕುಟುಂಬಗಳು ಖರ್ಚುಗಳನ್ನು ನಿಯಂತ್ರಿಣದಲ್ಲಿಟ್ಟುಕೊಳ್ಳಬೇಕು. ತಿಂಗಳ ಸಂಬಳದಾರರಾಗಿದ್ದರೆ, ಮೂರನೇ ಒಂದು ಭಾಗದಷ್ಟು ಉಳಿತಾಯ ಮತ್ತು ಹೂಡಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಉಳಿದ ಮೊತ್ತವನ್ನು ಮಾತ್ರ ನಿತ್ಯದ ಖರ್ಚಿಗೆ ವ್ಯಯ ಮಾಡಬೇಕು.
ಈ ನಿಯಮ ಪಾಲನೆ ತುಸು ಕಷ್ಟವೇ ಸರಿ. ಆದರೂ ನಮ್ಮೆಲ್ಲಾ ವೆಚ್ಚಗಳನ್ನು ಮೊದಲು ಪಟ್ಟಿ ಮಾಡಿಕೊಳ್ಳಬೇಕು. ಕೆಲವೊಮ್ಮೆ ನಾವು ಯಾವ ಕಾರಣಕ್ಕಾಗಿ ಹಣವನ್ನು ಹೆಚ್ಚು ಖರ್ಚು ಮಾಡಿದ್ದೇವೆ ಎಂಬುದನ್ನೂ ಕಂಡು ಹಿಡಿಯಬೇಕು. ಇದು ಅನಗತ್ಯ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದಾಯ ಹೆಚ್ಚಿದಲ್ಲಿ ಅದಕ್ಕನುಗುಣವಾಗಿ ನಮ್ಮ ಉಳಿತಾಯ ಹೆಚ್ಚಿಸಿಕೊಳ್ಳಬೇಕು. ಇದಕ್ಕೆ ಹೊಂದಿಕೊಂಡಂತೆ ಖರ್ಚು ಹೆಚ್ಚಾದರೆ ಎಚ್ಚರಿಕೆ ವಹಿಸಬೇಕು. ಹೀಗೆ ಮಾಡಿದಲ್ಲಿ ಮಾತ್ರ ದುಡಿದ ಹಣ ಉಳಿಸಲು ಸಾಧ್ಯ.
ಎಷ್ಟು ಹಣ ಎಲ್ಲಿ ಹೂಡಿಕೆ ಮಾಡಬೇಕು:ಇನ್ನು ನಮ್ಮ ಹಣವನ್ನು ಎಲ್ಲಿ, ಎಷ್ಟು, ಯಾವಾಗ ಹೂಡಿಕೆ ಮಾಡಬೇಕು ಎಂಬ ಬಗ್ಗೆ ನಿಖರ ಯೋಜನೆ ರೂಪಿಸಿಕೊಳ್ಳಬೇಕು. ಆರ್ಥಿಕ ಸ್ಥಿರತೆ ಸಾಧಿಸಬೇಕಾದರೆ ಹೂಡಿಕೆಗಳು ಅತ್ಯಗತ್ಯವಾಗಿವೆ. ಆರಂಭಿಕ ಮತ್ತು ದೀರ್ಘಾವಧಿಯ ಹೂಡಿಕೆ ಮಾಡಿದಾಗ ಮಾತ್ರ ಉತ್ತಮ ಆದಾಯ ಹೊಂದಲು ಸಾಧ್ಯ. ನಮ್ಮ ಹಣದ ಹರಿವನ್ನು ಹೊಂದಿಸಿಕೊಂಡು ಅದಕ್ಕೆ ಅನುಗುಣವಾಗಿ ಹೂಡಿಕೆ ಯೋಜಿಸಬೇಕು.
ಉದಾಹರಣೆಗೆ, 40 ವರ್ಷ ವಯಸ್ಸಿನ ವ್ಯಕ್ತಿ ಈಕ್ವಿಟಿಗಳಲ್ಲಿ 70 ರಿಂದ 80 ಪ್ರತಿಶತದವರೆಗೆ ಹೂಡಿಕೆ ಮಾಡಬಹುದು. ಇಪ್ಪತ್ತರಿಂದ ಮೂವತ್ತು ಪ್ರತಿಶತದಷ್ಟು ಸಾಲ ಯೋಜನೆಗಳು ಮತ್ತು ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ವಯಸ್ಸಿಗನುಸಾರವಾಗಿ ಇದರ ಅನುಪಾತವೂ ಬದಲಾಗಬೇಕು. 60 ವರ್ಷಕ್ಕೆ ಕಾಲಿಟ್ಟಾಗ ಈಕ್ವಿಟಿ ಹೂಡಿಕೆಗಳು 30 ರಿಂದ 60 ಪ್ರತಿಶತಕ್ಕೆ ಇಳಿಸಬೇಕು. ಈಕ್ವಿಟಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಪಡೆದಿರುವ ಸಾಲ ಮತ್ತು ಬ್ಯಾಂಕ್ ಮತ್ತು ಅಂಚೆ ಎಫ್ಡಿಗಳ ಬಗ್ಗೆ ಪೂರ್ಣ ಮಾಹಿತಿ ಹೊಂದಿರಬೇಕು.