ನವದೆಹಲಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರದಲ್ಲಿ ಸತತ ಮೂರು ಬಾರಿ ಹೆಚ್ಚಳವಾಗುವುದರೊಂದಿಗೆ ಅಂಚೆ ಕಚೇರಿಯ ಸ್ಥಿರ ಠೇವಣಿ ಯೋಜನೆಗಳು ಮತ್ತೊಮ್ಮೆ ಬ್ಯಾಂಕ್ ಎಫ್‌ಡಿಗಳಿಗೆ ಪೈಪೋಟಿ ನೀಡಲು ಮುಂದಾಗಿವೆ. ಸಣ್ಣ ಉಳಿತಾಯ ಯೋಜನೆಗಳ ಅಡಿಯಲ್ಲಿ ಅಂಚೆ ಕಚೇರಿ ಎರಡು ವರ್ಷಗಳ ಸ್ಥಿರ ಠೇವಣಿಗಳ ಮೇಲೆ ಶೇಕಡಾ 6.9 ರಷ್ಟು ಬಡ್ಡಿ ನೀಡಲಾಗುತ್ತಿದೆ. ಇದು ಇಷ್ಟೇ ಮೆಚ್ಯೂರಿಟಿ ಅವಧಿಯ ಠೇವಣಿಗಳ ಮೇಲೆ ಬಹುತೇಕ ಬ್ಯಾಂಕ್‌ಗಳು ನೀಡುವ ಬಡ್ಡಿ ದರಕ್ಕೆ ಸಮಾನವಾಗಿದೆ.
ರಿಸರ್ವ್ ಬ್ಯಾಂಕ್ ಮೇ 2022 ರಲ್ಲಿ ರೆಪೊ ದರವನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು ಮತ್ತು ಅಂದಿನಿಂದ ಇದು ಶೇಕಡಾ 4 ರಿಂದ ಶೇಕಡಾ 6.50 ಕ್ಕೆ ಏರಿಕೆಯಾಗಿದೆ. ಈ ಪರಿಣಾಮದಿಂದ ಕಳೆದ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಬ್ಯಾಂಕುಗಳು ಹೆಚ್ಚಿನ ಠೇವಣಿಗಳನ್ನು ಸಂಗ್ರಹಿಸಲು ಚಿಲ್ಲರೆ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿ ನೀಡಲು ಪ್ರಾರಂಭಿಸಿದವು. ಹೀಗಾಗಿ ಮೇ 2022 ರಿಂದ ಫೆಬ್ರವರಿ 2023 ರ ಅವಧಿಯಲ್ಲಿ, ಬ್ಯಾಂಕ್‌ಗಳ ಹೊಸ ಠೇವಣಿಗಳ ಮೇಲಿನ ಸರಾಸರಿ ದೇಶೀಯ ಸ್ಥಿರ ಠೇವಣಿ ದರವು (WADTDR) ಶೇಕಡಾ 2.22 ರಷ್ಟು ಹೆಚ್ಚಾಗಿದೆ.
ಅದೇ ಸಮಯದಲ್ಲಿ 2022-23 ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಬೃಹತ್ ಠೇವಣಿಗಳ ಮೇಲೆ ಬ್ಯಾಂಕುಗಳು ಹೆಚ್ಚು ಒತ್ತು ನೀಡಿದ್ದವು. ಆದರೆ, ದ್ವಿತೀಯಾರ್ಧದಲ್ಲಿ ಅವುಗಳ ಆದ್ಯತೆ ಬದಲಾಯಿತು ಮತ್ತು ಅವು ಚಿಲ್ಲರೆ ಠೇವಣಿಗಳನ್ನು ಹೆಚ್ಚಿಸುವತ್ತ ಹೆಚ್ಚು ಗಮನಹರಿಸಿದವು. ಇದರ ಒಂದು ಭಾಗವಾಗಿಯೇ ಬಡ್ಡಿದರ ಏರಿಕೆಯಾಗಿದೆ. ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳಿಗೆ (SSI) ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕಕ್ಕೆ ಶೇಕಡಾ 0.1 ರಿಂದ 0.3, ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಶೇಕಡಾ 0.2 ರಿಂದ 1.1 ಶೇಕಡಾ ಮತ್ತು ಏಪ್ರಿಲ್-ಜೂನ್ 2023 ತ್ರೈಮಾಸಿಕಕ್ಕೆ ಶೇಕಡಾ 0.1 ರಿಂದ 0.7 ರಷ್ಟು ಬಡ್ಡಿದರಗಳನ್ನು ಹೆಚ್ಚಿಸಿದೆ.