ಹೈದರಾಬಾದ್:ಭಾರತದ ಅತಿದೊಡ್ಡ ಪ್ರಯಾಣಿಕ ವಿಮಾನಯಾನ ಸಂಸ್ಥೆ ಇಂಡಿಗೋ ಮಂಗಳವಾರ ರಾತ್ರಿ ತನ್ನ ಆನ್‌ಲೈನ್ ವ್ಯವಸ್ಥೆಯನ್ನು ಅಪ್ಡೇಟ್ ಮಾಡಿದ್ದು, ಸಂಸ್ಥೆಯ ಎಲ್ಲ ಸಂಪರ್ಕ ಕೊಂಡಿಗಳು ಆಫ್‌ಲೈನ್ ಮೋಡ್ಗೆ ಜಾರಿವೆ. ಇದರಿಂದಾಗಿ ದೇಶಾದ್ಯಂತ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದಾರೆ.
ಪ್ರಯಾಣಿಕರಿಗಾದ ಕಿರಿಕಿರಿಯನ್ನು ಗಮನಿಸಿದ ಏರ್‌ಲೈನ್, ತನ್ನ ವೆಬ್‌ಸೈಟ್ ಮತ್ತು ಅದರ ಎಲ್ಲಾ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಸೂಕ್ತ ಮಾಹಿತಿ ನೀಡಿದೆ. ಬುಧವಾರ ಬೆಳಿಗ್ಗೆ 8.30ಕ್ಕೆ ಎಂದಿನಂತೆ ಸೇವೆ ಆರಂಭಿಸುವುದಾಗಿ ಭರವಸೆ ನೀಡಿತ್ತು. ಆದರೆ ಇತ್ತೀಚಿನ ಮಾಹಿತಿಯಂತೆ ವೆಬ್‌ಸೈಟ್ ಇನ್ನೂ ಅಪ್ಡೇಟ್ ಆಗುತ್ತಿದೆ ಎಂದೇ ತೋರಿಸುತ್ತಿದೆ.
ಇಂಡಿಗೋ ತನ್ನ ಪ್ರಕಟಣೆಯಲ್ಲಿ, ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಮತ್ತು ಸಂಪರ್ಕ ಕೇಂದ್ರ ಸದ್ಯ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ನಿರ್ದಿಷ್ಟ ಸಮಯದೊಳಗೆ ಯಾವುದೇ ಬುಕಿಂಗ್ ಮತ್ತು ಮಾರ್ಪಾಡುಗಳನ್ನು ಮಾಡುವುದಿಲ್ಲ ಎಂದು ಹೇಳಿದೆ. "ನಾವು ಫ್ಲೈಟ್ ಮೋಡ್‌ನಲ್ಲಿದ್ದೇವೆ. ಸುಧಾರಿತ ಗ್ರಾಹಕರ ಅನುಭವ ಒದಗಿಸಲು ನಮ್ಮ ವ್ಯವಸ್ಥೆಗಳು ಅಪ್‌ಗ್ರೇಡ್‌ಗೆ ಒಳಗಾಗುತ್ತಿವೆ" ಎಂದಿದೆ.
"ನಾವು ತಡೆರಹಿತ ವಿಮಾನ ಕಾರ್ಯಾಚರಣೆಗಳನ್ನು ಖಾತ್ರಿಪಡಿಸುತ್ತಿದ್ದು, ಸ್ವಯಂ ಬ್ಯಾಗೇಜ್ ಡ್ರಾಪ್ ಮತ್ತು ಡಿಜಿ ಯಾತ್ರಾ ಲಭ್ಯವಿರುವುದಿಲ್ಲ. ಸದ್ಯಕ್ಕೆ ಯಾವುದೇ ಬುಕಿಂಗ್/ಮಾರ್ಪಾಡುಗಳು/ವೆಬ್ ಚೆಕ್-ಇನ್ ಮಾಡಲಾಗುವುದಿಲ್ಲ" ಎಂದು ಇಂಡಿಗೋ ಮಾಹಿತಿ ನೀಡಿದೆ.