ನವದೆಹಲಿ: ಉಡುಪುಗಳು, ಸಾಗರ ಉತ್ಪನ್ನಗಳು, ಪ್ಲಾಸ್ಟಿಕ್ ಮತ್ತು ರತ್ನಗಳು ಹಾಗೂ ಆಭರಣಗಳ ತಯಾರಿಕೆಯ ಕಾರ್ಮಿಕ ಕೇಂದ್ರಿತ ವಲಯಗಳಲ್ಲಿ "ಟ್ರಬಲಿಂಗ್ ಪ್ಯಾಟರ್ನ್" ಗೋಚರಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಈ ವಲಯದ ಜಾಗತಿಕ ರಫ್ತಿನಲ್ಲಿ ದೇಶದ ಪಾಲು ಕುಸಿಯುತ್ತಿದೆ ಎಂದು FIEO ವರದಿ ಹೇಳಿದೆ. ಅಪೆಕ್ಸ್ ರಫ್ತುದಾರರ ಸಂಸ್ಥೆಯಾಗಿರುವ ಫೆಡರೇಶನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಸೇಶನ್ಸ್ (ಎಫ್‌ಐಇಒ) ಸುಮಾರು 40 ಶತಕೋಟಿ ಡಾಲರ್ ರಫ್ತು ಬೆಳವಣಿಗೆಯ ಬಗ್ಗೆ ಎಚ್ಚರಿಕೆಯ ಅಗತ್ಯವಿದೆ ಎಂದು ತಿಳಿಸಿದೆ.
ಏಕೆಂದರೆ, ಭಾರತದ ಮೂಲಕ ಯುರೋಪ್ಗೆ ಕಚ್ಚಾ ತೈಲ ವ್ಯಾಪಾರ ಮಾರ್ಗಗಳ ಮರುಹೊಂದಿಸುವಿಕೆ ನಡೆಯುತ್ತಿದೆ. ಇದು ಮುಂಬರುವ ವರ್ಷಗಳಲ್ಲಿ ಸುಸ್ಥಿರವಾಗಿರುವುದಿಲ್ಲ. ನಕಾರಾತ್ಮಕ ರಫ್ತು ಬೆಳವಣಿಗೆಗೆ ಕಾರ್ಮಿಕ ಕೇಂದ್ರಿತ ವಲಯದಲ್ಲಿನ ಕಳಪೆ ಕಾರ್ಯಕ್ಷಮತೆಯೂ ಕಾರಣವಾಗಿದೆ. ಈ ವಲಯ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವನ್ನು ಸೃಷ್ಟಿಸುವ ಜೊತೆಗೆ ಹೆಚ್ಚಿನ ನಿವ್ವಳ ಮೌಲ್ಯವರ್ಧನೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ ಎಂದು ವರದಿ ಹೇಳಿದೆ.
ಈ ಸವಾಲನ್ನು ಎದುರಿಸಲು ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳಲು ಕಾರಣವಾಗುವ ಅಂಶಗಳನ್ನು ಪರಿಶೀಲಿಸುವ ಪೂರ್ವಭಾವಿ ವಿಧಾನದ ಅಗತ್ಯವಿದೆ. ಸ್ಪರ್ಧಾತ್ಮಕ ಪ್ರಯೋಜನವನ್ನು ಕಾಪಾಡಿಕೊಳ್ಳುವುದು, ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ದಕ್ಷತೆಯನ್ನು ಹೆಚ್ಚಿಸುವುದರಿಂದ ಹಿಡಿದು ಗುಣಮಟ್ಟ ಮತ್ತು ನಾವೀನ್ಯತೆಯವರೆಗಿನ ಸಮಗ್ರ ವಿಶ್ಲೇಷಣೆಗೆ ಇದು ಒತ್ತು ನೀಡುತ್ತದೆ" ಎಂದಿದೆ.
ಸಾಂಪ್ರದಾಯಿಕ ವಲಯವನ್ನು ಉತ್ತೇಜಿಸುವ ಮಹತ್ವವನ್ನು ವಿವರಿಸಿದ ಎಫ್ಐಇಒ, 10 ಬಿಲಿಯನ್ ಡಾಲರ್ ಮೊತ್ತದ ಮೊಬೈಲ್ ಫೋನ್ಗಳ ರಫ್ತು ಸುಮಾರು 1ರಿಂದ 2 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದೆ. ಮತ್ತೊಂದೆಡೆ, ಸಾಂಪ್ರದಾಯಿಕ ವಲಯದ 10 ಬಿಲಿಯನ್ ಡಾಲರ್ ಮೌಲ್ಯದ ರಫ್ತುಗಳು 9 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಸೇರ್ಪಡೆಯನ್ನು ಹೊಂದಿರುತ್ತದೆ ಎಂದು ತಿಳಿಸಿದೆ.