ನವದೆಹಲಿ: ಫೆಬ್ರವರಿಯಲ್ಲಿ ರಷ್ಯಾದಿಂದ ಭಾರತದ ಕಚ್ಚಾ ತೈಲದ ಆಮದುಗಳು ಒಂದು ದಿನಕ್ಕೆ ದಾಖಲೆಯ 1.6 ಮಿಲಿಯನ್ ಬ್ಯಾರೆಲ್‌ಗಳಿಗೆ ಏರಿಕೆಯಾಗಿವೆ ಮತ್ತು ಇದು ಈಗ ಸಾಂಪ್ರದಾಯಿಕ ಪೂರೈಕೆದಾರರಾದ ಇರಾಕ್ ಮತ್ತು ಸೌದಿ ಅರೇಬಿಯಾದಿಂದ ಆಗುತ್ತಿರುವ ಒಟ್ಟಾರೆ ಆಮದುಗಳಿಗಿಂತ ಹೆಚ್ಚಾಗಿದೆ. ಇಂಧನ ಕಾರ್ಗೋ ಟ್ರ್ಯಾಕರ್ ವೋರ್ಟೆಕ್ಸಾ ಪ್ರಕಾರ, ಭಾರತ ಆಮದು ಮಾಡಿಕೊಳ್ಳುವ ಒಟ್ಟು ತೈಲದ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಪೂರೈಸುವ ಮೂಲಕ ಸತತ ಐದನೇ ತಿಂಗಳಿಗೆ ತೈಲ ಸಂಸ್ಕರಣಾಗಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆಗಿ ಪರಿವರ್ತಿಸಲಾದ ಕಚ್ಚಾ ತೈಲದ ಏಕೈಕ ಅತಿದೊಡ್ಡ ಪೂರೈಕೆದಾರರಾಗಿ ರಷ್ಯಾ ಮುಂದುವರೆದಿದೆ.
ಫೆಬ್ರವರಿ 2022 ರಲ್ಲಿ ರಷ್ಯಾ-ಉಕ್ರೇನ್ ಸಂಘರ್ಷ ಪ್ರಾರಂಭವಾಗುವ ಮೊದಲು ಭಾರತದ ಒಟ್ಟು ಆಮದುಗಳ ಪೈಕಿ ಶೇಕಡಾ 1 ಕ್ಕಿಂತ ಕಡಿಮೆ ಮಾರುಕಟ್ಟೆ ಪಾಲನ್ನು ರಷ್ಯಾ ಹೊಂದಿತ್ತು. ಫೆಬ್ರವರಿಯಲ್ಲಿ ಭಾರತದ ಆಮದುಗಳ ಪೈಕಿ ರಷ್ಯಾದ ಪಾಲು ದಿನಕ್ಕೆ 1.62 ಮಿಲಿಯನ್ ಬ್ಯಾರೆಲ್‌ಗಳಿಗೆ ಏರಿಕೆಯಾಗಿದೆ. ಇದು ಭಾರತದ ಒಟ್ಟು ಆಮದಿನ ಶೇಕಡಾ 35 ರಷ್ಟು ಆಗಿದೆ. ಚೀನಾ ಮತ್ತು ಅಮೆರಿಕದ ನಂತರ ಭಾರತ ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ಆಮದುದಾರ ದೇಶವಾಗಿದೆ. ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದಕ್ಕಾಗಿ ಮಾಸ್ಕೋವನ್ನು ಶಿಕ್ಷಿಸುವ ಸಾಧನವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾವನ್ನು ದೂರವಿಟ್ಟ ನಂತರ ರಿಯಾಯಿತಿಯಲ್ಲಿ ಲಭ್ಯವಿರುವ ರಷ್ಯಾದ ತೈಲವನ್ನು ಭಾರತ ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದೆ.
ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಕಾರಣದಿಂದ ಸೌದಿ ಅರೇಬಿಯಾ ಮತ್ತು ಅಮೆರಿಕ ದೇಶಗಳಿಂದ ಮಾಡಿಕೊಳ್ಳಲಾಗುತ್ತಿದ್ದ ಆಮದಿನ ಪ್ರಮಾಣ ಕಡಿಮೆಯಾಗಿದೆ. ಸೌದಿಯಿಂದ ತೈಲ ಆಮದು ತಿಂಗಳಿಗೆ 16 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಅಮೆರಿಕದಿಂದ 38 ಪ್ರತಿಶತದಷ್ಟು ಕಡಿಮೆಯಾಗಿದೆ. ವೋರ್ಟೆಕ್ಸಾ ಪ್ರಕಾರ, ಇರಾಕ್ ಮತ್ತು ಸೌದಿ ಅರೇಬಿಯಾದಿಂದ ಖರೀದಿಸುವ ಒಟ್ಟಾರೆ ತೈಲ ಪ್ರಮಾಣಕ್ಕಿಂತ ರಷ್ಯಾದಿಂದ ಖರೀದಿಸುತ್ತಿರುವ ತೈಲದ ಪ್ರಮಾಣ ಹೆಚ್ಚಾಗಿದೆ.