ನವದೆಹಲಿ : ಭಾರತದ ಸರಕು ವ್ಯಾಪಾರ ಕೊರತೆಯು (merchandise trade deficit) ಅಕ್ಟೋಬರ್ನಲ್ಲಿ 31.46 ಶತಕೋಟಿ ಡಾಲರ್ಗೆ ಏರಿಕೆಯಾಗಿದ್ದು, ಅದೇ ಸಮಯದಲ್ಲಿ ದೇಶದ ಆಮದು 65.03 ಶತಕೋಟಿ ಡಾಲರ್ಗೆ ಏರಿಕೆಯಾಗಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬರ್ತವಾಲ್ ಬುಧವಾರ ತಿಳಿಸಿದ್ದಾರೆ. ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿನ ತೀವ್ರ ಏರಿಕೆಯ ಕಾರಣದಿಂದ ದೇಶದ ಆಮದು ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ. ಅಂತೆಯೇ ಚಿನ್ನದ ಆಮದು 2022 ರ ಅಕ್ಟೋಬರ್ಗೆ ಹೋಲಿಸಿದರೆ ಶೇಕಡಾ 5.5 ರಷ್ಟು ಏರಿಕೆಯಾಗಿ 29.48 ಬಿಲಿಯನ್ ಡಾಲರ್ಗೆ ತಲುಪಿದೆ.
ಸೆಪ್ಟೆಂಬರ್ನಲ್ಲಿ ವ್ಯಾಪಾರ ಕೊರತೆ 19.37 ಬಿಲಿಯನ್ ಡಾಲರ್ ಆಗಿತ್ತು. ದೇಶದ ಸರಕು ರಫ್ತು ಅಕ್ಟೋಬರ್ನಲ್ಲಿ ಶೇಕಡಾ 6.2 ರಷ್ಟು ಏರಿಕೆಯಾಗಿ 33.57 ಬಿಲಿಯನ್ ಡಾಲರ್ಗೆ ತಲುಪಿದೆ. ಇದು 2022 ರ ಅಕ್ಟೋಬರ್ನಲ್ಲಿ ಇದ್ದ 31.60 ಬಿಲಿಯನ್ ಡಾಲರ್ಗಿಂತೆ ಹೆಚ್ಚಾಗಿದೆ. ಇನ್ನು ಸರಕು ಆಮದು 65.03 ಬಿಲಿಯನ್ ಡಾಲರ್ಗೆ ತಲುಪಿದೆ.
ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್ - ಅಕ್ಟೋಬರ್ ಅವಧಿಯಲ್ಲಿ ಸರಕು ರಫ್ತು ಶೇಕಡಾ 7 ರಷ್ಟು ಕುಸಿದು 244.89 ಬಿಲಿಯನ್ ಡಾಲರ್ಗೆ ತಲುಪಿದೆ. ಏಪ್ರಿಲ್ - ಅಕ್ಟೋಬರ್ ಸರಕು ಆಮದು 391.96 ಬಿಲಿಯನ್ ಡಾಲರ್ಗೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 8.95 ರಷ್ಟು ಕಡಿಮೆಯಾಗಿದೆ.