ನವದೆಹಲಿ:ಡಿಸೆಂಬರ್ 22, 2023 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು 4.471 ಬಿಲಿಯನ್ ಡಾಲರ್ ಏರಿಕೆಯಾಗಿ 620.441 ಬಿಲಿಯನ್ ಡಾಲರ್ಗೆ ತಲುಪಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. 2023 ರ ಕ್ಯಾಲೆಂಡರ್ ವರ್ಷದಲ್ಲಿ ಆರ್ಬಿಐ ತನ್ನ ವಿದೇಶಿ ವಿನಿಮಯ ಸಂಗ್ರಹಕ್ಕೆ ಸುಮಾರು 58 ಬಿಲಿಯನ್ ಡಾಲರ್ ಸೇರಿಸಿದೆ.
ಕಳೆದ ವಾರ, ವಿದೇಶಿ ವಿನಿಮಯ ಮೀಸಲುಗಳ ಅತಿದೊಡ್ಡ ಅಂಶವಾದ ಭಾರತದ ವಿದೇಶಿ ಕರೆನ್ಸಿ ಸ್ವತ್ತುಗಳು (ಎಫ್ಸಿಎ) 4.698 ಬಿಲಿಯನ್ ಡಾಲರ್ನಷ್ಟು ಏರಿಕೆಯಾಗಿ 549.747 ಬಿಲಿಯನ್ ಡಾಲರ್ಗೆ ತಲುಪಿದೆ ಎಂದು ಆರ್ಬಿಐನ ಸಾಪ್ತಾಹಿಕ ಅಂಕಿ ಅಂಶಗಳು ತಿಳಿಸಿವೆ. ವಾರದಲ್ಲಿ ಚಿನ್ನದ ಮೀಸಲು 102 ಮಿಲಿಯನ್ ಡಾಲರ್ ಇಳಿದು 474.74 ಬಿಲಿಯನ್ ಡಾಲರ್ಗೆ ತಲುಪಿದೆ. 2022 ರಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹ ಒಟ್ಟಾರೆಯಾಗಿ 71 ಬಿಲಿಯನ್ ಡಾಲರ್ ಕುಸಿದಿತ್ತು ಎಂಬುದು ಗಮನಾರ್ಹ.
ವಿದೇಶಿ ವಿನಿಮಯ ಮೀಸಲು (ಎಫ್ಎಕ್ಸ್ ಮೀಸಲುಗಳು) ರಾಷ್ಟ್ರದ ಕೇಂದ್ರ ಬ್ಯಾಂಕ್ ಅಥವಾ ವಿತ್ತೀಯ ಪ್ರಾಧಿಕಾರವು ಹೊಂದಿರುವ ಸ್ವತ್ತುಗಳಾಗಿವೆ. ಇದನ್ನು ಸಾಮಾನ್ಯವಾಗಿ ಮೀಸಲು ಕರೆನ್ಸಿಗಳಲ್ಲಿ ಇರಿಸಲಾಗುತ್ತದೆ. ಇವು ಸಾಮಾನ್ಯವಾಗಿ ಯುಎಸ್ ಡಾಲರ್ ಮತ್ತು ಸ್ವಲ್ಪ ಮಟ್ಟಿಗೆ ಯುರೋ, ಜಪಾನೀಸ್ ಯೆನ್ ಮತ್ತು ಪೌಂಡ್ ಸ್ಟರ್ಲಿಂಗ್ ಕರೆನ್ಸಿಗಳ ರೂಪದಲ್ಲಿರುತ್ತವೆ. ಅಂತರರಾಷ್ಟ್ರೀಯ ಬಾಕಿ ಪಾವತಿ ಮಾಡಲು ಮತ್ತು ವಿನಿಮಯ ದರದ ಅಪಾಯಗಳ ವಿರುದ್ಧ ರಕ್ಷಣೆ ಪಡೆಯುವುದಕ್ಕಾಗಿ ವಿದೇಶಿ ವಿನಿಮಯ ಮೀಸಲುಗಳನ್ನು ಸಂಗ್ರಹಿಸಿ ಇಡಲಾಗುತ್ತದೆ.