ಕರ್ನಾಟಕ

karnataka

ETV Bharat / business

ಭಾರತದ ವಿತ್ತೀಯ ಕೊರತೆ 11.91 ಲಕ್ಷ ಕೋಟಿಗೆ ಏರಿಕೆ - ಒಟ್ಟು ಆದಾಯ ಮತ್ತು ಒಟ್ಟು ವೆಚ್ಚದ ನಡುವಿನ ವ್ಯತ್ಯಾಸ

ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ ಭಾರತದ ವಿತ್ತೀಯ ಕೊರತೆಯು 11.91 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಭಾರತದ ವಿತ್ತೀಯ ಕೊರತೆ 11.91 ಲಕ್ಷ ಕೋಟಿಗೆ ಏರಿಕೆ
ಭಾರತದ ವಿತ್ತೀಯ ಕೊರತೆ 11.91 ಲಕ್ಷ ಕೋಟಿಗೆ ಏರಿಕೆ

By

Published : Feb 28, 2023, 6:50 PM IST

ನವದೆಹಲಿ: ದೇಶದ ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳ ವಿತ್ತೀಯ ಕೊರತೆಯು 11.91 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದು 2022-23ರ ಸಂಪೂರ್ಣ ವರ್ಷದ ಗುರಿಯ ಶೇ 67.8 ರಷ್ಟಿದೆ ಎಂದು ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್​ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ. ಕಳೆದ ವರ್ಷದಲ್ಲಿ ಇದೇ ಅವಧಿಗೆ ವಿತ್ತೀಯ ಕೊರತೆಯು ಹಿಂದಿನ ಹಣಕಾಸಿನ ಗುರಿಯ ಶೇಕಡಾ 58.9 ರಷ್ಟಿತ್ತು.

ಕೇಂದ್ರ ಬಜೆಟ್‌ನಲ್ಲಿ 2022-23ನೇ ಸಾಲಿನ ವಿತ್ತೀಯ ಕೊರತೆಯ ಗುರಿಯನ್ನು 16.61 ಲಕ್ಷ ಕೋಟಿಯಿಂದ 17.55 ಲಕ್ಷ ಕೋಟಿಗೆ ಹೆಚ್ಚಿಸಲು ಸರ್ಕಾರವು ಗುರಿಯನ್ನು ಪರಿಷ್ಕರಣೆ ಮಾಡಿದೆ. 2022-23ರ ಏಪ್ರಿಲ್-ಜನವರಿ ಅವಧಿಯ ಒಟ್ಟು ಆದಾಯದ ಸ್ವೀಕೃತಿಗಳು ರೂ 19.76 ಲಕ್ಷ ಕೋಟಿಗಳಾಗಿದ್ದು, ಇದು 2022-23ರ ಪರಿಷ್ಕೃತ ಬಜೆಟ್ ಅಂದಾಜಿನ ರೂ 24.32 ಲಕ್ಷ ಕೋಟಿಯ 81.3 ಪ್ರತಿಶತವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ, ಒಟ್ಟು ಸ್ವೀಕೃತಿಗಳು ಬಜೆಟ್ ಅಂದಾಜಿನ ಶೇಕಡಾ 88.5 ರಷ್ಟಿತ್ತು.

ಜನವರಿ 2023ಕ್ಕೆ ಕೊನೆಗೊಳ್ಳುವ 10 ತಿಂಗಳ ಅವಧಿಗೆ ನಿವ್ವಳ ತೆರಿಗೆ ಆದಾಯವು 16.89 ಲಕ್ಷ ಕೋಟಿ ರೂ.ಗಳಾಗಿದ್ದು, ಇದು ಸಂಪೂರ್ಣ ಹಣಕಾಸಿನ ಗುರಿಯ ಶೇಕಡಾ 80.9 ಆಗಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ, ಸಂಗ್ರಹಿಸಲಾದ ನಿವ್ವಳ ತೆರಿಗೆ ಆದಾಯವು ವಾರ್ಷಿಕ ಗುರಿಯ ಶೇಕಡಾ 87.7 ರಷ್ಟಿತ್ತು. 2022-23 ರಲ್ಲಿ ಜನವರಿ ವರೆಗಿನ ಒಟ್ಟು ವೆಚ್ಚವು 31.67 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಇದು 2022-23 ರ ಗುರಿಯ 75.7 ಶೇಕಡಾ ಆಗಿದೆ.

2022-23 ರ ಏಪ್ರಿಲ್ ಮತ್ತು ಜನವರಿ ನಡುವೆ ಸರ್ಕಾರವು 31,123 ಕೋಟಿ ರೂಪಾಯಿಗಳನ್ನು ಬಂಡವಾಳ ಹಿಂತೆಗೆದುಕೊಳ್ಳುವುದರ ಮೂಲಕ ಸಂಗ್ರಹಿಸಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಪರಿಷ್ಕೃತ ಗುರಿಯಾದ 50,000 ಕೋಟಿ ರೂ.ಗಳ 62 ಪ್ರತಿಶತವಾಗಿದೆ. ಏಪ್ರಿಲ್ ನಿಂದ ಜನವರಿ ಅವಧಿಯಲ್ಲಿ ಕೇಂದ್ರ ಮಾರುಕಟ್ಟೆ ಸಾಲವು 10.05 ಲಕ್ಷ ಕೋಟಿ ರೂ.ಗೆ ಏರಿದೆ. ಇದು ಪ್ರಸ್ತುತ ಹಣಕಾಸಿನ ಗುರಿಗಳ ಶೇ 84 ರಷ್ಟಾಗಿದೆ.

ದೇಶದ ವಿತ್ತೀಯ ಕೊರತೆ ಎಂದರೇನು?: ಸರ್ಕಾರದ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚದ ನಡುವಿನ ವ್ಯತ್ಯಾಸವನ್ನು ವಿತ್ತೀಯ ಕೊರತೆ ಎಂದು ಕರೆಯಲಾಗುತ್ತದೆ. ಇದು ಸರ್ಕಾರಕ್ಕೆ ಅಗತ್ಯವಿರುವ ಒಟ್ಟು ಸಾಲಗಳ ಸೂಚನೆಯಾಗಿದೆ. ಒಟ್ಟು ಆದಾಯವನ್ನು ಲೆಕ್ಕಾಚಾರ ಮಾಡುವಾಗ ಸಾಲಗಳನ್ನು ಸೇರಿಸಲಾಗುವುದಿಲ್ಲ. ಒಟ್ಟು ವಿತ್ತೀಯ ಕೊರತೆಯು (GFD) ಆದಾಯದ ರಸೀದಿಗಳು (ಬಾಹ್ಯ ಅನುದಾನಗಳನ್ನು ಒಳಗೊಂಡಂತೆ) ಮತ್ತು ಸಾಲಗಳ ಹೊರತಾದ ಬಂಡವಾಳ ರಸೀದಿಗಳ ಮೇಲಿನ ಸಾಲಗಳ ನಿವ್ವಳ ಚೇತರಿಕೆ ಸೇರಿದಂತೆ ಒಟ್ಟು ವೆಚ್ಚದ ಹೆಚ್ಚುವರಿಯಾಗಿದೆ. ಸಾಮಾನ್ಯವಾಗಿ ವಿತ್ತೀಯ ಕೊರತೆಯು ಆದಾಯ ಕೊರತೆ ಅಥವಾ ಬಂಡವಾಳ ವೆಚ್ಚದಲ್ಲಿನ ಪ್ರಮುಖ ಏರಿಕೆಯಿಂದಾಗಿ ಸಂಭವಿಸುತ್ತದೆ.

ವಿತ್ತೀಯ ಎಂದರೆ ಇದು ಸರ್ಕಾರದ ಆದಾಯಕ್ಕೆ ಸಂಬಂಧಿಸಿದೆ. ಈ ಪದವನ್ನು ಯಾವುದೇ ಸಂದರ್ಭದಲ್ಲಿ ಬಳಸಿದಾಗ ಅದು ಸರ್ಕಾರದ ಆದಾಯವನ್ನು ಉಲ್ಲೇಖಿಸುತ್ತದೆ ಎಂದು ಅರ್ಥಮಾಡಿಕೊಳ್ಳಬಹುದು.

ಇದನ್ನೂ ಓದಿ : 2023ರ ಹಣಕಾಸು ವರ್ಷದಲ್ಲಿ ರಾಜ್ಯಗಳ ವಿತ್ತೀಯ ಕೊರತೆ ಜಿಡಿಪಿಯ ಶೇ.3.4 ನಿರೀಕ್ಷೆ: ಇಂಡ್​ - ರಾ ವರದಿ

ABOUT THE AUTHOR

...view details