ಬೆಂಗಳೂರು: ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್ನಲ್ಲಿ ದೇಶದಲ್ಲಿನ ವಿದ್ಯುತ್ ಬಳಕೆಯು ಶೇಕಡಾ 16 ಕ್ಕಿಂತ ಹೆಚ್ಚು ಏರಿಕೆಯಾಗಿ 151.66 ಬಿಲಿಯನ್ ಯೂನಿಟ್ಗಳಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ, ವಿದ್ಯುತ್ ಬಳಕೆ ಪ್ರಮಾಣ 130.39 ಬಿಲಿಯನ್ ಯುನಿಟ್ (ಬಿಯು) ಆಗಿದ್ದು, ಇದು ಆಗಸ್ಟ್ 2021 ರಲ್ಲಿ ಇದ್ದ 127.88 ಬಿಯುಗಿಂತ ಹೆಚ್ಚಾಗಿತ್ತು ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
ಆಗಸ್ಟ್ 2023 ರಲ್ಲಿ ಒಂದು ನಿರ್ದಿಷ್ಟ ದಿನದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆಯು 236.59 ಗಿಗಾವ್ಯಾಟ್ಗೆ ಏರಿದೆ. ಆಗಸ್ಟ್ 2022 ರಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆಯು 195.22 ಗಿಗಾವ್ಯಾಟ್ ಮತ್ತು ಆಗಸ್ಟ್ 2021 ರಲ್ಲಿ 196.27 ಗಿಗಾವ್ಯಾಟ್ ಆಗಿತ್ತು. ಬೇಸಿಗೆಯಲ್ಲಿ ದೇಶದ ವಿದ್ಯುತ್ ಬೇಡಿಕೆ ಪ್ರಮಾಣ 229 ಗಿಗಾವ್ಯಾಟ್ ತಲುಪಲಿದೆ ಎಂದು ಇಂಧನ ಸಚಿವಾಲಯ ಅಂದಾಜಿಸಿತ್ತು.
ಅಕಾಲಿಕ ಮಳೆಯಿಂದಾಗಿ ಈ ವರ್ಷದ ಏಪ್ರಿಲ್-ಜುಲೈನಲ್ಲಿ ಬೇಡಿಕೆ ನಿಗದಿತ ಮಟ್ಟವನ್ನು ತಲುಪಿರಲಿಲ್ಲ. ಆದಾಗ್ಯೂ ಜೂನ್ನಲ್ಲಿ ಗರಿಷ್ಠ ಪೂರೈಕೆಯು 223.29 ಗಿಗಾವ್ಯಾಟ್ನ ಹೊಸ ಗರಿಷ್ಠವನ್ನು ತಲುಪಿದೆ ಮತ್ತು ಜುಲೈನಲ್ಲಿ ಇದು 208.95 ಗಿಗಾವ್ಯಾಟ್ ಆಗಿತ್ತು.
ಇದನ್ನೂ ಓದಿ: ಭಾರತದ ಜಿಡಿಪಿ ಬೆಳವಣಿಗೆ ಅಂದಾಜನ್ನು ಶೇ 6.7ಕ್ಕೆ ಹೆಚ್ಚಿಸಿದ ಮೂಡೀಸ್ ಇನ್ವೆಸ್ಟರ್ಸ್
ದೇಶದಲ್ಲಿ ಈ ವರ್ಷದ ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್ನಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ವಿದ್ಯುತ್ ಬಳಕೆಯ ಪ್ರಮಾಣ ಕಡಿಮೆಯಾಗಿತ್ತು ಎಂದು ಉದ್ಯಮ ತಜ್ಞರು ತಿಳಿಸಿದ್ದಾರೆ. ಮುಖ್ಯವಾಗಿ ಹೆಚ್ಚಿನ ಬಿಸಿಗಾಳಿಯ ಹವಾಮಾನ ಪರಿಸ್ಥಿತಿಗಳಿಂದಾಗಿ ಮತ್ತು ಹಬ್ಬದ ಋತುವಿಗೆ ಮುಂಚಿತ ಕೈಗಾರಿಕಾ ಚಟುವಟಿಕೆಗಳಲ್ಲಿ ಹೆಚ್ಚಳದಿಂದಾಗಿ ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಬಳಕೆ ಮತ್ತು ಬೇಡಿಕೆ ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆಗಸ್ಟ್ನಲ್ಲಿ ಗರಿಷ್ಠ ವಿದ್ಯುತ್ ಸರಬರಾಜು 236.59 ಗಿಗಾವ್ಯಾಟ್ನ ಹೊಸ ಗರಿಷ್ಠ ಮಟ್ಟ ಮುಟ್ಟಿದೆ ಮತ್ತು ಸೆಪ್ಟೆಂಬರ್ 1, 2023 ರಂದು 239.97 ಗಿಗಾವ್ಯಾಟ್ ದಾಖಲೆಯ ಮಟ್ಟವನ್ನು ತಲುಪಿದೆ. ಆದಾಗ್ಯೂ, ವಾರಾಂತ್ಯದಲ್ಲಿ ಅನೇಕ ಸಂಸ್ಥೆಗಳು ಮುಚ್ಚಲ್ಪಡುವುದರಿಂದ ಒಂದು ದಿನದ ಗರಿಷ್ಠ ವಿದ್ಯುತ್ ಸರಬರಾಜು ಶನಿವಾರ 238.62 ಗಿಗಾವ್ಯಾಟ್ ಮತ್ತು ಭಾನುವಾರ 223.12 ಗಿಗಾವ್ಯಾಟ್ಗೆ ಇಳಿದಿದೆ. ಮುಂಬರುವ ತಿಂಗಳುಗಳಲ್ಲಿ ವಿದ್ಯುತ್ ಬಳಕೆ ಮತ್ತು ಬೇಡಿಕೆ ಸ್ಥಿರವಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ವೇಗ ಪಡೆಯುತ್ತಿರುವುದರಿಂದ ದೇಶದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತದಲ್ಲಿ ಒಟ್ಟು ವಿದ್ಯುತ್ ಬಳಕೆಯ ಅರ್ಧದಷ್ಟು ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ನಾಲ್ಕನೇ ಒಂದು ಭಾಗದಷ್ಟು ವಿದ್ಯುತ್ ಅನ್ನು ಮನೆಗಳು ಬಳಸಿದರೆ, ಕೃಷಿಯ ಪಾಲು ಆರನೇ ಒಂದು ಭಾಗಕ್ಕಿಂತ ಹೆಚ್ಚಾಗಿದೆ.
ಇದನ್ನೂ ಓದಿ : ಇನ್ನು ಯುಪಿಐ ಮೂಲಕ ಡಿಜಿಟಲ್ ರೂಪಾಯಿ ಪಾವತಿ ಸಾಧ್ಯ! ಹೇಗೆ ಗೊತ್ತೇ?