ನವದೆಹಲಿ: ಜಿ-20 ಗುಂಪಿನ ರಾಷ್ಟ್ರಗಳ ಆರ್ಥಿಕ ಬೆಳವಣಿಗೆಯು 2023ರಲ್ಲಿ ಶೇ 2.8 ರಿಂದ ಶೇ 2.1ಕ್ಕೆ ಕುಸಿತವಾಗಲಿದೆ ಮತ್ತು 2025ರಲ್ಲಿ ಶೇ 2.6ಕ್ಕೆ ಏರಿಕೆಯಾಗಲಿದೆ ಎಂದು ಮೂಡೀಸ್ ತನ್ನ ಜಾಗತಿಕ ಸ್ಥೂಲ ಆರ್ಥಿಕ ದೃಷ್ಟಿಕೋನ 2024 - 25ರ ವರದಿಯಲ್ಲಿ ತಿಳಿಸಿದೆ. ಉದಯೋನ್ಮುಖ ಮಾರುಕಟ್ಟೆ ದೇಶಗಳಲ್ಲಿನ ಹಣಕಾಸು ಪರಿಸ್ಥಿತಿಗಳು ಗಮನಾರ್ಹವಾಗಿ ಬದಲಾಗಲಿದ್ದು ಭಾರತ, ಬ್ರೆಜಿಲ್, ಮೆಕ್ಸಿಕೊ ಮತ್ತು ಇಂಡೋನೇಷ್ಯಾದಂತಹ ಕೆಲ ದೇಶಗಳ ಆರ್ಥಿಕತೆಗಳು ನಿರೀಕ್ಷೆಗಳಿಗಿಂತ ಉತ್ತಮವಾಗಿ ಬೆಳವಣಿಗೆಯಾಗಲಿವೆ. ಆದರೆ, ಟರ್ಕಿ ಮತ್ತು ಅರ್ಜೆಂಟೀನಾದ ದೃಷ್ಟಿಕೋನಗಳು ಹೆಚ್ಚು ಅನಿಶ್ಚಿತವಾಗಿವೆ ಎಂದು ವರದಿ ಹೇಳಿದೆ.
ಭಾರತದ ಸುಸ್ಥಿರ ದೇಶೀಯ ಬೇಡಿಕೆಯ ಬೆಳವಣಿಗೆಯು ದೇಶದ ಆರ್ಥಿಕತೆಯನ್ನು ಮುನ್ನಡೆಸುತ್ತಿದೆ ಎಂದು ವರದಿ ತಿಳಿಸಿದೆ. ದೃಢವಾದ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ, ಹೆಚ್ಚುತ್ತಿರುವ ವಾಹನ ಮಾರಾಟ, ಹೆಚ್ಚುತ್ತಿರುವ ಗ್ರಾಹಕರ ಆಶಾವಾದ ಮತ್ತು ಎರಡಂಕಿ ಸಾಲದ ಬೆಳವಣಿಗೆಯು ಪ್ರಸ್ತುತ ಹಬ್ಬದ ಋತುವಿನಲ್ಲಿ ನಗರ ಬಳಕೆಯ ಬೇಡಿಕೆ ಏರಿಕೆಯಲ್ಲಿ ಉಳಿಯುತ್ತದೆ ಎಂಬುದನ್ನು ಸೂಚಿಸುತ್ತದೆ.
ಇನ್ನು ಗ್ರಾಮೀಣ ಪ್ರದೇಶಗಳನ್ನು ನೋಡುವುದಾದರೆ - ಆರಂಭದಲ್ಲಿ ಸುಧಾರಣೆ ಚಿಹ್ನೆಗಳನ್ನು ತೋರಿಸಿದ್ದ ಗ್ರಾಮೀಣ ಆರ್ಥಿಕತೆ ಮಾನ್ಸೂನ್ ಕೊರತೆಯಿಂದ ಅಪಾಯಕ್ಕೀಡಾಗಿದೆ. ಮಾನ್ಸೂನ್ ಕೊರತೆಯು ಬೆಳೆಗಳ ಇಳುವರಿಯನ್ನು ಕಡಿಮೆ ಮಾಡಲಿದ್ದು, ಇದರಿಂದ ಆದಾಯ ಕೊರತೆಯಾಗಲಿದೆ ಎಂದು ವರದಿ ತಿಳಿಸಿದೆ.