ನವದೆಹಲಿ: ದೇಶದ ಸದೃಢ ಆರ್ಥಿಕ ಬೆಳವಣಿಗೆಯಿಂದಾಗಿ ಭಾರತೀಯ ಕಾರ್ಪೊರೇಟ್ ಕಂಪನಿಗಳ ಲಾಭ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಫಿಚ್ ರೇಟಿಂಗ್ಸ್ ಭವಿಷ್ಯ ನುಡಿದಿದೆ. ನಿಧಾನಗತಿಯ ಸಾಗರೋತ್ತರ ಮಾರುಕಟ್ಟೆಗಳಿಂದ ಉದ್ಭವಿಸುವ ಸವಾಲುಗಳ ಹೊರತಾಗಿಯೂ, ಮಾರ್ಚ್ 2025ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಶೇಕಡಾ 6.5 ಕ್ಕೆ ಅಂದಾಜಿಸಲಾದ ಜಿಡಿಪಿಯೊಂದಿಗೆ ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಲಿದೆ. ನಿರೀಕ್ಷಿತ ಆರ್ಥಿಕ ವಿಸ್ತರಣೆಯು ವಿವಿಧ ಕ್ಷೇತ್ರಗಳಲ್ಲಿ ಬೇಡಿಕೆಯನ್ನು ಹೆಚ್ಚಿಸಲಿದೆ ಮತ್ತು ಇದು ಕಂಪನಿಗಳ ಲಾಭವನ್ನು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸಲಿದೆ ಎಂದು ಫಿಚ್ ತಿಳಿಸಿದೆ.
2025ರ ಹಣಕಾಸು ವರ್ಷದಲ್ಲಿ ಕಂಪನಿಗಳ ಲಾಭದಾಯಕತೆ ಏರಿಕೆಯಾಗಲಿದೆ ಎಂದು ಫಿಚ್ ರೇಟಿಂಗ್ಸ್ ಊಹಿಸಿದ್ದು, 2023ರ ಹಣಕಾಸು ವರ್ಷದ ಮಟ್ಟಕ್ಕೆ ಹೋಲಿಸಿದರೆ 290 ಬೇಸಿಸ್ ಪಾಯಿಂಟ್ಗಳ ಹೆಚ್ಚಳವಾಗಬಹುದು ಎಂದು ಅಂದಾಜು ಮಾಡಿದೆ. ಲಾಭದ ಈ ಹೆಚ್ಚಳವು ಇನ್ಪುಟ್ ವೆಚ್ಚದ ಒತ್ತಡವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಭಾರತೀಯ ಕಾರ್ಪೊರೇಟ್ಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲಿದೆ ಎಂದು ಫಿಚ್ ಹೇಳಿದೆ.
ಸಿಮೆಂಟ್, ವಿದ್ಯುತ್, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಉಕ್ಕು ಭಾರತದ ಆರ್ಥಿಕ ಆವೇಗದಿಂದ ಲಾಭ ಪಡೆಯಲಿರುವ ಪ್ರಮುಖ ಕ್ಷೇತ್ರಗಳಾಗಿವೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಿಂದಿನ ಮಟ್ಟಕ್ಕಿಂತ ಹೆಚ್ಚಿನ ಬೇಡಿಕೆ ದೇಶದಲ್ಲಿ ನಿರ್ಮಾಣವಾಗಲಿದೆ ಎಂಬುದನ್ನು 2023ರ ಹೈ-ಫ್ರೀಕ್ವೆನ್ಸಿ ಡೇಟಾ ಸೂಚಿಸುತ್ತದೆ ಎಂದು ಫಿಚ್ ತಿಳಿಸಿದೆ.