ನವದೆಹಲಿ: ಭಾರತದ ಇ-ಚಿಲ್ಲರೆ (e-retail) ಮಾರುಕಟ್ಟೆ (ಆಫ್ಲೈನ್ ಮತ್ತು ಆನ್ಲೈನ್ ಚಾನೆಲ್ಗಳು) 2028 ರ ವೇಳೆಗೆ 160 ಬಿಲಿಯನ್ ಡಾಲರ್ ಮೌಲ್ಯವನ್ನು ದಾಟುವ ನಿರೀಕ್ಷೆಯಿದೆ ಎಂದು ವರದಿಯೊಂದು ಬುಧವಾರ ತೋರಿಸಿದೆ. (ಭಾರತದ ರೂಪಾಯಿ ಲೆಕ್ಕದಲ್ಲಿ ಇದು ಸುಮಾರು 13ಲಕ್ಷ ಕೋಟಿ ರೂಪಾಯಿ ವ್ಯವಹಾರ ಆಗುತ್ತದೆ) ಸುಧಾರಿತ ಭೌತಿಕ ಮತ್ತು ಡಿಜಿಟಲ್ ಸೌಲಭ್ಯ, ಹೆಚ್ಚಾದ ಕೈಗೆಟುಕುವಿಕೆ, ಅನುಕೂಲತೆ ಮತ್ತು ಡಿಜಿಟಲ್ ವ್ಯವಸ್ಥೆಯ ಬೆಳವಣಿಗೆಯ ಕಾರಣದಿಂದ ಇ-ರಿಟೇಲ್ ಮಾರುಕಟ್ಟೆ ಬೆಳವಣಿಗೆಯಾಗಲಿದೆ ಎಂದು ವರದಿ ತಿಳಿಸಿದೆ.
ಕೊರೊನಾ ಸಾಂಕ್ರಾಮಿಕದ ನಂತರದ ಅವಧಿಯಲ್ಲಿ ಮಾರುಕಟ್ಟೆಯು ಬಲವಾದ ಬೆಳವಣಿಗೆ ಕಾಣುತ್ತಿದ್ದು, 2023 ರಲ್ಲಿ ಅಂದಾಜು $ 57 ರಿಂದ $ 60 ಬಿಲಿಯನ್ ವಹಿವಾಟು ನಡೆದಿದೆ. ಫ್ಲಿಪ್ಕಾರ್ಟ್ ಸಹಯೋಗದೊಂದಿಗೆ ಬೈನ್ & ಕಂಪನಿ ತಯಾರಿಸಿದ ವರದಿಯ ಪ್ರಕಾರ, ಇ-ರಿಟೇಲ್ ಮಾರುಕಟ್ಟೆ 2020 ರಿಂದ ವಾರ್ಷಿಕ 8 ರಿಂದ 12 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ.
ಮುಂಬರುವ ವರ್ಷಗಳಲ್ಲಿ ಇ-ರಿಟೇಲ್ ಮಾರುಕಟ್ಟೆಯು ಮತ್ತಷ್ಟು ಬೆಳವಣಿಗೆಯಾಗಲು ಸಜ್ಜಾಗಿದೆ. ಸದ್ಯ ಭಾರತೀಯರು ಮಾಡುವ ಒಟ್ಟಾರೆ ಚಿಲ್ಲರೆ ಖರೀದಿಯ ಖರ್ಚಿನ ಪೈಕಿ ಆನ್ಲೈನ್ ಮೂಲಕ ಮಾಡುವ ವೆಚ್ಚ ಶೇಕಡಾ 5 ರಿಂದ 6 ರಷ್ಟಿದೆ. ಇದು ಅಮೆರಿಕದಲ್ಲಿ ಶೇಕಡಾ 23 ರಿಂದ 24 ಮತ್ತು ಚೀನಾದಲ್ಲಿ ಶೇಕಡಾ 35 ಕ್ಕಿಂತ ಹೆಚ್ಚಾಗಿದೆ. ಅಂದರೆ ಭಾರತದಲ್ಲಿ ಆನ್ಲೈನ್ ಇ-ರಿಟೇಲ್ ಮಾರುಕಟ್ಟೆಯ ಬೆಳವಣಿಗೆಗೆ ಇನ್ನೂ ಸಾಕಷ್ಟು ಅವಕಾಶವಿದೆ.