ಮುಂಬೈ (ಮಹಾರಾಷ್ಟ್ರ):ಸ್ಥಳೀಯ ಷೇರುಪೇಟೆಗಳು ಸೋಮವಾರ ಸತತ ಎರಡನೇ ವಹಿವಾಟಿನಲ್ಲಿ ಕುಸಿತ ಕಂಡಿದ್ದು, ಬಿಎಸ್‌ಇ ಸೆನ್ಸೆಕ್ಸ್ ಸುಮಾರು 300 ಅಂಕಗಳನ್ನು ಕುಸಿತ ಕಂಡಿದೆ. ಪ್ರಮುಖ ಷೇರುಗಳ ಭಾರೀ ಮಾರಾಟದಿಂದಾಗಿ ಮಾರುಕಟ್ಟೆಯು ಕುಸಿತದ ಹಾದಿ ಹಿಡಿದಿದೆ. ವರ್ತಕರ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಬಂಡವಾಳ ಹಿಂತೆಗೆದುಕೊಳ್ಳುವಿಕೆ ಹಾಗೂ ಕಚ್ಚಾ ತೈಲ ಬೆಲೆ ಏರಿಕೆಯು ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಇದಲ್ಲದೇ, ಹೂಡಿಕೆದಾರರು ಈ ವಾರ ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್‌ನ ಹಣಕಾಸು ನೀತಿ ಪರಾಮರ್ಶೆಗಾಗಿ ಕಾಯುತ್ತಿದ್ದಾರೆ.
ಬಿಎಸ್‌ಇ ಸೆನ್ಸೆಕ್ನ ಪ್ರಮುಖ 30 ಷೇರುಗಳ ಸೂಚ್ಯಂಕ 299.48 ಪಾಯಿಂಟ್‌ಗಳು ಅಥವಾ 0.45 ಶೇಕಡಾ ಇಳಿಕೆಯಾಗಿ 66,384.78 ಪಾಯಿಂಟ್‌ಗಳಿಗೆ ಕೊನೆಗೊಂಡಿತು. ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಕೂಡ 72.65 ಪಾಯಿಂಟ್ ಅಥವಾ ಶೇಕಡಾ 0.37 ರಷ್ಟು ಇಳಿಕೆಯಾಗಿ 19,672.35 ಪಾಯಿಂಟ್‌ಗಳಿಗೆ ತಲುಪಿದೆ. ವ್ಯವಹಾರದ ಸಮಯದಲ್ಲಿ, ಇದು 19,782.75 ರಿಂದ 19,658.30 ಪಾಯಿಂಟ್‌ಗಳ ವ್ಯಾಪ್ತಿಯಲ್ಲಿ ಉಳಿಯಿತು. 30 ಸೆನ್ಸೆಕ್ಸ್ ಷೇರುಗಳಲ್ಲಿ 18 ಲಾಭದಲ್ಲಿದ್ದರೆ, 50 ನಿಫ್ಟಿ ಷೇರುಗಳಲ್ಲಿ 25 ಲಾಭದಲ್ಲಿದ್ದವು.
ಷೇರು ಮಾರುಕಟ್ಟೆ ವಹಿವಾಟು:ಇಂಡಸ್‌ಇಂಡ್ ಬ್ಯಾಂಕ್, ಮಹೀಂದ್ರಾ ಮತ್ತು ಮಹೀಂದ್ರಾ, ಪವರ್ ಗ್ರಿಡ್ ಮತ್ತು ಬಜಾಜ್ ಫಿನ್‌ಸರ್ವ್ ಸೆನ್ಸೆಕ್ಸ್ ಷೇರುಗಳಲ್ಲಿ ಶೇಕಡಾ 2.01 ರಷ್ಟು ಏರಿಕೆ ಕಂಡಿವೆ. ಮತ್ತೊಂದೆಡೆ, ಐಟಿಸಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಟೆಕ್ ಮಹೀಂದ್ರಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಷ್ಟ ಅನುಭವಿಸಿವೆ. ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರವೃತ್ತಿ ಕಂಡು ಬಂದಿದೆ. ಜಪಾನ್‌ನ ನಿಕ್ಕಿ ಲಾಭದಲ್ಲಿದ್ದರೆ, ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಮತ್ತು ಚೀನಾದ ಶಾಂಘೈ ಕಾಂಪೋಸಿಟ್ ನಷ್ಟದಲ್ಲಿದೆ. ಯುರೋಪ್‌ನ ಪ್ರಮುಖ ಮಾರುಕಟ್ಟೆಗಳು ಆರಂಭಿಕ ವಹಿವಾಟಿನಲ್ಲಿ ಮಿಶ್ರ ಪ್ರವೃತ್ತಿಯನ್ನು ತೋರಿಸಿದವು. ಶುಕ್ರವಾರ ಅಮೆರಿಕದ ಮಾರುಕಟ್ಟೆಗಳು ಲಾಭದಲ್ಲಿವೆ.
ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 0.73 ಶೇಕಡಾ ಏರಿಕೆಯಾಗಿ 81.66 ಡಾಲರ್ಗೆ ತಲುಪಿದೆ. ಷೇರುಪೇಟೆಯ ಅಂಕಿಅಂಶಗಳ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ 1,988.77 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದಕ್ಕೂ ಮುನ್ನ, ಶುಕ್ರವಾರ, ಮಾರುಕಟ್ಟೆಯಲ್ಲಿ ಆರು ದಿನಗಳ ನಿರಂತರ ಬೆಳೆವಣಿಗೆಯು ಅಂತ್ಯಗೊಂಡಿತು. ಎರಡೂ ಬೆಂಚ್‌ಮಾರ್ಕ್ ಸೂಚ್ಯಂಕಗಳು ಶೇಕಡಾ ಒಂದಕ್ಕಿಂತ ಹೆಚ್ಚು ಇಳಿದವು. ಸೆನ್ಸೆಕ್ಸ್ 887.64 ಪಾಯಿಂಟ್ ಅಥವಾ 1.31 ಶೇಕಡಾ ಇಳಿಕೆಯಾಗಿ 66,684.26 ಪಾಯಿಂಟ್‌ಗಳಿಗೆ ಕೊನೆಗೊಂಡಿತು. ನಿಫ್ಟಿ ಕೂಡ 234.15 ಪಾಯಿಂಟ್ ಅಂದರೆ ಶೇ.1.17ರಷ್ಟು ಕುಸಿದು 19,745 ಅಂಕಗಳಿಗೆ ತಲುಪಿದೆ.