ನವದೆಹಲಿ:ಕಳೆದ ಎರಡು ವರ್ಷಗಳಲ್ಲಿ ಭಾರತದ ಸ್ಟಾರ್ಟಪ್ ಕಂಪನಿಗಳು 35,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿವೆ ಮತ್ತು ಈ ವಜಾ ಪ್ರಕ್ರಿಯೆ 2024ರ ಆರಂಭದಲ್ಲಿಯೂ ಮುಂದುವರಿಯಲಿದೆ ಎಂದು ವರದಿ ಹೇಳಿದೆ. 2022ರಲ್ಲಿ ಬೈಜುಸ್, ಓಲಾ, ಅನ್ಅಕಾಡೆಮಿ, ಬ್ಲಿಂಕಿಟ್ ಮತ್ತು ವೈಟ್ ಹ್ಯಾಟ್ ಜೂನಿಯರ್, ಸ್ಕಿಲ್-ಲಿಂಕ್, ಗೋ ಮೆಕಾನಿಕ್, ಶೇರ್ ಚಾಟ್ ಮತ್ತು ಜೆಸ್ಟ್ ಮನಿ ಮುಂತಾದ ಭಾರತೀಯ ಸ್ಟಾರ್ಟಪ್ ಕಂಪನಿಗಳು 18,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ.
2023 ರಲ್ಲಿ 17,000ಕ್ಕೂ ಹೆಚ್ಚು ಜನ ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ ಮತ್ತು ಈ ಪಟ್ಟಿ ಬೆಳೆಯುತ್ತಿದೆ ಎಂದು ಇಂಕ್ 42 ವರದಿ ತಿಳಿಸಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಶೇರ್ ಚಾಟ್ ಕಂಪನಿಯ ಪುನರ್ರಚನೆಯ ಭಾಗವಾಗಿ 200 ಉದ್ಯೋಗಿಗಳನ್ನು ಅಥವಾ ತನ್ನ ಶೇಕಡಾ 15ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ.
ಗೇಮ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಲೋಕೋ ತನ್ನ ಒಟ್ಟು 110 ಸಿಬ್ಬಂದಿಯ ಪೈಕಿ ಸುಮಾರು 36 ಪ್ರತಿಶತ ಅಥವಾ 40 ಉದ್ಯೋಗಿಗಳನ್ನು ವಜಾಗೊಳಿಸಿದೆ. ಗೂಗಲ್ ಬೆಂಬಲಿತ ಎಜುಟೆಕ್ ಪ್ಲಾಟ್ಫಾರ್ಮ್ ಅಡ್ಡಾ 247 ಸುಮಾರು 250ರಿಂದ 300 ಉದ್ಯೋಗಿಗಳನ್ನು ವಜಾಗೊಳಿಸಿದೆ.