ನವದೆಹಲಿ:ಕಡಿಮೆ ಜನಸಂಚಾರ ಇರುವ ಪ್ರದೇಶದ ಆಯ್ದ ರೈಲುಗಳ ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್ಗೆ ಶೇಕಡಾ 25ರಷ್ಟು ರಿಯಾಯಿತಿ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ. ವಂದೇ ಭಾರತ್, ವಿಸ್ಟಾಡೋಮ್ ಹಾಗು ಅನುಭೂತಿ ಸೇರಿದಂತೆ ಇನ್ನಿತರ ರೈಲುಗಳು ರಿಯಾಯಿತಿಯಡಿ ಬರಲಿವೆ.
ಶೇಕಡಾ 50ಕ್ಕಿಂತ ಕಡಿಮೆ ಪ್ರಯಾಣಿಕರು ಸಂಚರಿಸುವ ಆಯ್ದ ಪ್ರದೇಶಗಳ ಆಯ್ದ ರೈಲುಗಳಿಗೆ ಡಿಸ್ಕೌಂಟ್ ಟಿಕೆಟ್ ದರ ಸಿಗಲಿದೆ. ಈ ಪ್ರದೇಶಗಳಲ್ಲಿ ರೈಲು ಸಂಚಾರವನ್ನು ಹೆಚ್ಚಿಸುವ ಸಲುವಾಗಿ ಈ ರಿಯಾಯಿತಿಯನ್ನು ಘೋಷಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ಹೇಳಲಾಗಿದೆ.
ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಘೋಷಿಸಲಾದ ರಿಯಾಯಿತಿ ದರದ ಯೋಜನೆಯನ್ನು ಯಾವೆಲ್ಲ ರೈಲುಗಳಿಗೆ ನೀಡಬೇಕು ಎಂಬುದನ್ನು ರೈಲ್ವೇ ವಲಯಗಳ ಪ್ರಧಾನ ವಾಣಿಜ್ಯ ವ್ಯವಸ್ಥಾಪಕರೇ ನಿರ್ಧರಿಸಬೇಕು. ಅವರಿಗೆ ಡಿಸ್ಕೌಂಟ್ ನೀಡುವ ಅಧಿಕಾರವನ್ನು ರೈಲ್ವೆ ಸಚಿವಾಲಯ ನೀಡಿದೆ.
ಈ ರಿಯಾಯಿತಿ ಯೋಜನೆಯು ಎಲ್ಲ ಸಾಮಾನ್ಯ ರೈಲುಗಳ ಜೊತೆಗೆ ಅನುಭೂತಿ ಮತ್ತು ವಿಸ್ಟಾಡೋಮ್, ವಂದೇ ಭಾರತ್ನ ಎಸಿ ಚೇರ್ ಕಾರ್, ಎಕ್ಸಿಕ್ಯೂಟಿವ್ ಆಸನಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ.