ವಾಷಿಂಗ್ಟನ್:ಭಾರತೀಯ ಮೂಲದ ಅಮೆರಿಕ ನಿವಾಸಿ ಅಜಯ್ ಬಂಗಾ ವಿಶ್ವ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೂನ್ 2 ರಿಂದ ಮುಂದಿನ 5 ವರ್ಷಗಳವರೆಗೆ ಅಧ್ಯಕ್ಷರಾಗಿ ಇರಲಿದ್ದಾರೆ. ಬಂಗಾ ಅವರು ವಿಶ್ವಬ್ಯಾಂಕ್‌ನ 14ನೇ ಅಧ್ಯಕ್ಷರಾಗಲಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನಾಮನಿರ್ದೇಶನಗೊಂಡ ಡೇವಿಡ್ ಮಾಲ್ಪಾಸ್ ಅವರಿಂದ ಬಂಗಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಅಮೆರಿಕವೇ ವಿಶ್ವ ಬ್ಯಾಂಕ್ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ. 1944 ರಲ್ಲಿ ಯುರೋಪ್ ದೇಶಗಳೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಅವಕಾಶ ಆ ದೇಶಕ್ಕಿದೆ. ಅದರಂತೆ ಅಧ್ಯಕ್ಷ ಜೋ ಬೈಡನ್ ಅವರು ಅಜಯ್ ಬಂಗಾರನ್ನು ಫೆಬ್ರವರಿಯಲ್ಲಿ ಮುಖ್ಯಸ್ಥರ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದರು.
ಅಜಯ್ ಬಂಗಾ ಮೂರು ದಶಕಕ್ಕೂ ಅಧಿಕ ಸಮಯದಿಂದ ಜಾಗತಿಕವಾಗಿ ಉದ್ಯೋಗ ಸೃಷ್ಟಿ, ದೊಡ್ಡ ಆರ್ಥಿಕತೆಯಲ್ಲಿ ಹೂಡಿಕೆ ಸೃಷ್ಟಿ ಸೇರಿದಂತೆ ಹಲವಾರು ಬದಲಾವಣೆಗಳ ಮೂಲಕವೇ ಜಾಗತಿಕವಾಗಿ ಖ್ಯಾತರಾಗಿದ್ದಾರೆ. ಹಲವಾರು ಸಂಸ್ಥೆಗಳಿಗೆ ಆರ್ಥಿಕ ಯಶಸ್ಸಿಗೆ ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಅಂತಹ ವ್ಯಕ್ತಿಯನ್ನು ವಿಶ್ವ ಬ್ಯಾಂಕ್ಗೆ ನಿರ್ದೇಶನ ಮಾಡಲಾಗುವುದು ಎಂದು ಬೈಡನ್ ಹೆಸರು ಸೂಚಿಸುವ ವೇಳೆ ಹೇಳಿದ್ದರು.
"ಅಜಯ್ ಬಂಗಾ ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗಿದ್ದಾರೆ. ಅವರ ಪರಿಣತಿ, ಅನುಭವ ಮತ್ತು ನಾವೀನ್ಯತೆ ಪರಿವರ್ತನೆ ತರಲಿದೆ" ಎಂದು ಬೈಡನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೀಗ ಅಧ್ಯಕ್ಷರಾಗಿ ಬ್ಯಾಂಕ್ ಸಮಿತಿ ಸದಸ್ಯರು ಸೂಚಿಸಿದ ಬಳಿಕ "ಮಂಡಳಿಯು ಬಂಗಾ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದೆ" ಎಂದು ವಿಶ್ವ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.