ಗಾಂಧಿನಗರ(ಗುಜರಾತ್): ಭಾರತವು 2047ರ ವೇಳೆಗೆ 40 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ ಮತ್ತು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದರು. ಶುದ್ಧ ಇಂಧನ ಕ್ರಾಂತಿ, ಜೈವಿಕ ಇಂಧನ ಕ್ರಾಂತಿ ಮತ್ತು ಡಿಜಿಟಲ್ ಕ್ರಾಂತಿಯನ್ನು ಮುಂದಿನ ದಶಕಗಳಲ್ಲಿ ಭಾರತದ ಬೆಳವಣಿಗೆಯನ್ನು ನಿರ್ಧರಿಸುವ "ಮೂರು ಗೇಮ್-ಚೇಂಜಿಂಗ್ ಕ್ರಾಂತಿಗಳು" ಎಂದು ಇದೇ ವೇಳೆ ಅವರು ಅಭಿಪ್ರಾಯಪಟ್ಟಿದ್ದಾರೆ.
ಆರ್ಥಿಕ ಬೆಳವಣಿಗೆ ಮತ್ತು ಅವಕಾಶಗಳಲ್ಲಿ ಅಭೂತಪೂರ್ವ ಬೆಳವಣಿಗೆ:ಪಂಡಿತ್ ದೀನ್ ದಯಾಳ್ ಎನರ್ಜಿ ಯೂನಿವರ್ಸಿಟಿ (ಪಿಡಿಇಯು)ಯ ಘಟಿಕೋತ್ಸವದಲ್ಲಿ ಮಂಗಳವಾರ ಮಾತನಾಡಿದ ಮುಕೇಶ್ ಅಂಬಾನಿ, ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸಿಕೊಳ್ಳಲಿರುವ 25 ವರ್ಷಗಳ ಅವಧಿಯ ಅಮೃತ್ ಕಾಲ್ ಸಮಯದಲ್ಲಿ "ಆರ್ಥಿಕ ಬೆಳವಣಿಗೆ ಮತ್ತು ಅವಕಾಶಗಳಲ್ಲಿ ಅಭೂತಪೂರ್ವ ಬೆಳವಣಿಗೆಗೆ ಸಜ್ಜಾಗಿದೆ ಎಂದು ಹೇಳಿದರು.
ಈ ಮೂರು ಕ್ರಾಂತಿಗಳು ಒಟ್ಟಾಗಿ ಊಹೆಗೂ ನಿಲುಕದ ರೀತಿಯಲ್ಲಿ ಜೀವನವನ್ನು ಪರಿವರ್ತಿಸುತ್ತವೆ ಎಂದು ಅವರು ಹೇಳಿದರು. ಶುದ್ಧ ಇಂಧನ ಕ್ರಾಂತಿ ಮತ್ತು ಜೈವಿಕ ಇಂಧನ ಕ್ರಾಂತಿಯು ಸುಸ್ಥಿರವಾಗಿ ಇಂಧನವನ್ನು ಉತ್ಪಾದಿಸಿದರೆ, ಡಿಜಿಟಲ್ ಕ್ರಾಂತಿಯು ಇಂಧನವನ್ನು ಸಮರ್ಥವಾಗಿ ಬಳಸಿಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ. ಎಲ್ಲ ಮೂರು ಕ್ರಾಂತಿಗಳು ಒಟ್ಟಾಗಿ ಹವಾಮಾನ ಬಿಕ್ಕಟ್ಟಿನಿಂದ ನಮ್ಮ ಸುಂದರ ಗ್ರಹವನ್ನು ಉಳಿಸಲು ಭಾರತವು ಜಗತ್ತಿಗೆ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.