ನವದೆಹಲಿ:'ಹಣದ ರಾಜ' ಎಂದೇ ಕರೆಯಲಾಗುವ ಡಾಲರ್ ಸದ್ಯ ಎಲ್ಲ ಕರೆನ್ಸಿಗಳಿಗಿಂತಲೂ ದುಬಾರಿಯಾಗಿದೆ. ಡಾಲರ್ನಲ್ಲೇ ವಿದೇಶಿ ವಹಿವಾಟು ನಡೆಯುತ್ತದೆ. ಆದರೆ, ಇದನ್ನು ತಗ್ಗಿಸಲು ಭಾರತ ದಿಟ್ಟ ಹೆಜ್ಜೆ ಇಟ್ಟಿದೆ. ಭಾರತಕ್ಕೆ ಪ್ರಮುಖ ಇಂಧನ ಪೂರೈಕೆದಾರ ರಾಷ್ಟ್ರವಾದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಿಂದ ಖರೀದಿಸಿದ ಕಚ್ಚಾತೈಲ ಬಿಲ್ ಅನ್ನು ರೂಪಾಯಿಯಲ್ಲೇ ಪಾವತಿಸಿದೆ. ಇದು ಅಮೆರಿಕದ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ.
ಕಳೆದ ಬಾರಿ ಯುಎಇ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಜೊತೆ ಆಯಾ ದೇಶಗಳ ಕರೆನ್ಸಿಗಳಲ್ಲಿ ವ್ಯಾಪಾರ ಮಾಡುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಈಗ ಯುಎಇಯಿಂದ ಖರೀದಿಸಿದ ಕಚ್ಚಾತೈಲಕ್ಕೆ ರೂಪಾಯಿಯಲ್ಲೇ ಹಣ ಸಂದಾಯ ಮಾಡಲಾಗಿದೆ.
ಅಬುಧಾಬಿಯ ನ್ಯಾಷನಲ್ ಆಯಿಲ್ ಕಂಪನಿಯಿಂದ ಖರೀದಿಸಲಾದ 1 ಮಿಲಿಯನ್ ಬ್ಯಾರೆಲ್ ಕಚ್ಚಾತೈಲಕ್ಕೆ ಭಾರತದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಸೋಮವಾರ ರೂಪಾಯಿಯಲ್ಲಿ ವಹಿವಾಟು ನಡೆಸಿದೆ. ಇದನ್ನು ಭಾರತದಲ್ಲಿರುವ ಯುಎಇ ರಾಯಭಾರಿ ಕಚೇರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
1 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಖರೀದಿ:ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಹೊಸದಾಗಿ ಜಾರಿಗೆ ತಂದ ಲೋಕಲ್ ಕರೆನ್ಸಿ ಸೆಟಲ್ಮೆಂಟ್ (ಎಲ್ಸಿಎಸ್) ವ್ಯವಸ್ಥೆಯಡಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ ಮೊಟ್ಟಮೊದಲ ಬಾರಿಗೆ ಕಚ್ಚಾ ತೈಲ ವಹಿವಾಟನ್ನು ಆಯಾ ದೇಶದ ಕರೆನ್ಸಿಯಲ್ಲೇ ನಡೆಸಲಾಗಿದೆ. ಈ ವಹಿವಾಟಿನಲ್ಲಿ ಸುಮಾರು 1 ಮಿಲಿಯನ್ ಬ್ಯಾರೆಲ್ಗಳ ಕಚ್ಚಾತೈಲದ ಮಾರಾಟವನ್ನು ಒಳಗೊಂಡಿತ್ತು. ವಹಿವಾಟಿಗೆ ಭಾರತೀಯ ರೂಪಾಯಿ ಮತ್ತು ಯುಎಇಯ ದಿರ್ಹಾಮ್ಗಳನ್ನು ಬಳಸಲಾಗಿದೆ ಎಂದು ತಿಳಿಸಿದೆ.