ನವ ದೆಹಲಿ: ಭಾರತದ ಸ್ಮಾರ್ಟ್‌ವಾಚ್ ಮಾರುಕಟ್ಟೆಯು ಜಾಗತಿಕವಾಗಿ ಬೃಹದಾಕಾರವಾಗಿ ಬೆಳೆಯುತ್ತಿದೆ. ದೇಶದಲ್ಲಿ ಈ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ವಿಶೇಷ ಪ್ರಗತಿ ಕಾಣುತ್ತಿದ್ದು ಈ ವರ್ಷಾರಂಭದಿಂದ 171 ಪ್ರತಿಶತದಷ್ಟು ಬೆಳೆದಿದೆ ಎಂದು ಕೌಂಟರ್ಪಾಯಿಂಟ್ ರಿಸರ್ಚ್ ಎಂಬ ಸಂಸ್ಥೆಯು ತನ್ನ ಹೊಸ ವರದಿಯಲ್ಲಿ ತಿಳಿಸಿದೆ. ಹಣದುಬ್ಬರ ಮತ್ತು ಪ್ರಾದೇಶಿಕ ರಾಜಕೀಯ ಬಿಕ್ಕಟ್ಟಿನ ನಡುವೆಯೂ ವರ್ಷದ ಆರಂಭದಿಂದಲೂ ಸ್ಮಾರ್ಟ್ ವಾಚ್ ಮಾರುಕಟ್ಟೆ ಬೆಳವಣಿಗೆ ಹೊಂದುತ್ತಿರುವುದು ಗಮನಾರ್ಹ.
2022ರ ಮೊದಲ ತ್ರೈಮಾಸಿಕದಲ್ಲಿ ದೇಶದ ಸ್ಮಾರ್ಟ್‌ವಾಚ್ ಮಾರುಕಟ್ಟೆ ಶೇ 171 ದಷ್ಟು ಬೆಳೆಯುವ ಮೂಲಕ ಜಗತ್ತಿನ ದೊಡ್ಡ ಮಾರುಕಟ್ಟೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಭಾರತದ ಹಬ್ಬದ ಸೀಸನ್‌ಗಳು. ಭಾರತದ ಬ್ರಾಂಡ್ಗಳು ತಮ್ಮ ಉತ್ಪನ್ನವನ್ನು ಕೈಗೆಟುಕುವ ದರದಲ್ಲಿ ನೀಡುತ್ತಿವೆ. ಸ್ಥಳೀಯ ಉತ್ಪಾದನೆಗೆ ಒತ್ತು ನೀಡುವುದೂ ಸಹ ಬೆಳವಣಿಗೆಗೆ ಕೊಡುಗೆ ನೀಡಿದಂತೆ ಎಂದು ಮಾರುಕಟ್ಟೆ ವಿಶ್ಲೇಷಕ ಅಂಶಿಕ ಜೈನ್ ಹೇಳುತ್ತಾರೆ.
ಇತ್ತೀಚೆಗೆ ಬಿಡುಗಡೆಗೊಂಡ ಆ್ಯಪಲ್ ವಾಚ್ 8 ಸೀರಿಸ್ ಹೆಚ್ಚು ಮಾರಾಟವಾಗುತ್ತಿದ್ದು, ಇದು ಶೇ 48 ರಷ್ಟು ಬೆಳವಣಿಗೆ ಕಂಡಿದೆ. ವರ್ಷದಿಂದ ವರ್ಷಕ್ಕೆ ನಾಯ್ಸ್ ವಾಚ್ ಮಾರಾಟ ಕೂಡ ಹೆಚ್ಚಾಗುತ್ತಿದ್ದು ಇದು ಶೇ 218 ರಷ್ಟು ಬೆಳೆದಿದ್ದು, ಭಾರತದ ಮಾರುಕಟ್ಟೆಯ ಟಾಪರ್ ಆಗಿದೆ. ನಾಯ್ಸ್ ಇಂಡಿಯಾಗೆ ಹೋಲಿಕೆ ಮಾಡಿದರೆ ಫಿಟ್ಬಿಟ್ ಸಂಸ್ಥೆಯು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದ್ದು, ಎರಡನೇ ಸ್ಥಾನದಲ್ಲಿದೆ.