ನವದೆಹಲಿ: ಶ್ರೀಲಂಕಾದ ನೆರವಿಗೆ ಭಾರತ ಮತ್ತೊಮ್ಮೆ ಮುಂದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮಾರ್ಚ್ 2022ರಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಶ್ರೀಲಂಕಾಕ್ಕೆ ನೀಡಲಾಗಿದ್ದ 1 ಶತಕೋಟಿ ಅಮೆರಿಕನ್ ಡಾಲರ್ ಸಾಲದ ಮರು ಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ. ಈ ಬಗ್ಗೆ ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಮಂಗಳವಾರ ಮಾಹಿತಿ ನೀಡಿದೆ. ಈ ಮೂಲಕ ಸಾಲದ ಮೊತ್ತವನ್ನು ಭಾರತಕ್ಕೆ ಹಿಂದಿರುಗಿಸಲು ಶ್ರೀಲಂಕಾಗೆ ಮತ್ತೊಂದು ವರ್ಷ ಹೆಚ್ಚಿನ ಸಮಯ ಸಿಕ್ಕಂತಾಗಿದೆ. ಇದಕ್ಕೆ ಸಂಬಂಧಿಸಿದ ತಿದ್ದುಪಡಿ ಒಪ್ಪಂದಕ್ಕೆ ಅಧಿಕಾರಿಗಳು ಸಹಿ ಹಾಕಿದ್ದಾರೆ.
ಕೊಲಂಬೊದಲ್ಲಿರುವ ಭಾರತೀಯ ಹೈ ಕಮಿಷನ್ ಪ್ರಕಾರ, ಹಣಕಾಸು ಖಾತೆ ರಾಜ್ಯ ಸಚಿವ ಶೆಹನ್ ಸೆಮಾಸಿಂಘೆ, ಶ್ರೀಲಂಕಾದ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಕೊಲಂಬೊದಲ್ಲಿನ ಭಾರತೀಯ ಹೈ ಕಮಿಷನ್‌ನ ಅಧಿಕಾರಿಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅದೇ ಸಮಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ.
ಶ್ರೀಲಂಕಾ ಕಳೆದ ವರ್ಷದಿಂದ ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಭಾರತವು ನೆರೆಯ ರಾಷ್ಟ್ರವಾಗಿರುವುದರಿಂದ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಿದೆ. ಈ ತಿಂಗಳ ಆರಂಭದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಅವರು, ಶ್ರೀಲಂಕಾಕ್ಕೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಹಾಯ ಮಾಡಿರುವುದಕ್ಕಿಂತಲೂ ಹೆಚ್ಚಿನದನ್ನು ಭಾರತ ಮಾಡಿದೆ ಎಂದು ಹೇಳಿದ್ದರು.
ಹಿಂದೂ ಮಹಾಸಾಗರದ ದ್ವೀಪಗಳು, ಕೊಲ್ಲಿ ರಾಷ್ಟ್ರಗಳು ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳನ್ನು ಒಳಗೊಂಡ ವಿಸ್ತೃತ ನೆರೆಹೊರೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದರು.