ಬ್ಯೂನಸ್ ಐರಸ್ (ಅರ್ಜೆಂಟೀನಾ): ಭಾರತದಲ್ಲಿ ತಯಾರಾದ ತೇಜಸ್ ಯುಧ್ಧವಿಮಾನಗಳನ್ನು ತನ್ನ ಸೇನಾಪಡೆಯಲ್ಲಿ ಸೇರಿಸಿಕೊಳ್ಳಲು ಅರ್ಜೆಂಟೀನಾ ಆಸಕ್ತಿ ವ್ಯಕ್ತಪಡಿಸಿದೆ ಎಂದು ಭಾರತ ಸರ್ಕಾರ ಶುಕ್ರವಾರ ತಿಳಿಸಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅರ್ಜೆಂಟೀನಾಗೆ ಎರಡು ದಿನಗಳ ಕಾಲ ಭೇಟಿ ನೀಡಿದ ಸಂದರ್ಭದಲ್ಲಿ ತೇಜಸ್ ಬಗ್ಗೆ ಮಾತುಕತೆಗಳು ನಡೆದಿವೆ.
ಅರ್ಜೆಂಟೀನಾ ವಿದೇಶಾಂಗ ಸಚಿವ ಸ್ಯಾಂಟಿಯಾಗೊ ಕಾಫಿರೊ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ, ಇಎಎಂ ಜೈಶಂಕರ್ ಅವರು ರಕ್ಷಣಾ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶದ ಕಾರ್ಯತಂತ್ರದ ವಲಯಗಳಲ್ಲಿ ನಡೆಯುತ್ತಿರುವ ಸಹಕಾರವನ್ನು ಪರಿಶೀಲಿಸಿದರು. ಜೈಶಂಕರ್ ಮತ್ತು ವಿದೇಶಾಂಗ ಸಚಿವ ಕೆಫಿರೋ ಎರಡೂ ದೇಶಗಳ ನಡುವಿನ ಜಂಟಿ ಆಯೋಗದ ಸಭೆ (ಜೆಸಿಎಂ) ಅಧ್ಯಕ್ಷತೆ ವಹಿಸಿದ್ದರು. ಭೇಟಿಯ ವೇಳೆ ಜೈಶಂಕರ್ ಅವರು ಅರ್ಜೆಂಟೀನಾ ಅಧ್ಯಕ್ಷ ಡಾ. ಅಲ್ಬರ್ಟೊ ಫೆರ್ನಾಂಡಿಸ್ ಅವರನ್ನು ಕೂಡ ಭೇಟಿ ಮಾಡಿದರು.
ಭಾರತ ಮತ್ತು ಅರ್ಜೆಂಟೀನಾ ರಕ್ಷಣಾ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶದ ಕಾರ್ಯತಂತ್ರದ ವಲಯಗಳಲ್ಲಿ ನಡೆಯುತ್ತಿರುವ ಸಹಕಾರವನ್ನು ಪರಿಶೀಲಿಸಿದವು ಮತ್ತು ಪರಸ್ಪರ ಲಾಭಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ತಮ್ಮ ಬದ್ಧತೆ ಪುನರುಚ್ಚರಿಸಿದವು ಎಂದು ಜಂಟಿ ಹೇಳಿಕೆ ತಿಳಿಸಿದೆ. 2019 ರಲ್ಲಿ ಸಹಿ ಹಾಕಲಾದ ರಕ್ಷಣಾ ಸಹಕಾರದ ಎಂಒಯು ಚೌಕಟ್ಟಿನೊಳಗೆ ರಕ್ಷಣಾ ವಲಯದಲ್ಲಿ ಸಹಕಾರವನ್ನು ಹೆಚ್ಚಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.