ತೆರಿಗೆದಾರರು ಆರ್ಥಿಕ ವರ್ಷದಲ್ಲಿ ಮಾಡಿದ ಎಲ್ಲಾ ಹಣಕಾಸಿನ ವಹಿವಾಟುಗಳ ಬಗ್ಗೆ, ಅವರಿಗೆ ಒಂದೇ ಸಮಗ್ರ ವರದಿ ನೀಡಲು ಆದಾಯ ತೆರಿಗೆಯ ವಾರ್ಷಿಕ ಮಾಹಿತಿ ಸ್ಟೇಟ್ಮೆಂಟ್ ಪದ್ಧತಿಯನ್ನು (AIS-Annual Information Statement) ಕಳೆದ ವರ್ಷದ ನವೆಂಬರ್‌ನಲ್ಲಿ ಪರಿಚಯಿಸಲಾಯಿತು. ತೆರಿಗೆದಾರರು ಅಡೆತಡೆ ಇಲ್ಲದೆ ಆದಾಯ ತೆರಿಗೆ ರಿಟರ್ನ್ (ITR) ಫೈಲ್ ಮಾಡುವುದು, ಸ್ವಯಂಪ್ರೇರಿತರಾಗಿ ತೆರಿಗೆ ಫೈಲ್ ಮಾಡುವುದು ಮತ್ತು ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವುದನ್ನು ತಡೆಗಟ್ಟುವ ಉದ್ದೇಶಗಳಿಗಾಗಿ ಎಐಎಸ್ ನೀಡುವ ಯೋಜನೆ ಆರಂಭಿಸಲಾಗಿದೆ.
"ಈ ಮುನ್ನ ತೆರಿಗೆದಾರರು ಈ ಮಾಹಿತಿಯನ್ನು ಪಡೆಯಲು ಬಹಳ ಕಷ್ಟ ಪಡುವಂತಾಗಿತ್ತು. ಆದರೆ ಈಗ ಆ ಎಲ್ಲ ಮಾಹಿತಿ ಅವರ ಬೆರಳ ತುದಿಯಲ್ಲಿದೆ ಮತ್ತು ಅದೇ ಕಾರಣದಿಂದ ಅವರು ಸ್ವಯಂಪ್ರೇರಿತರಾಗಿ ಸಕಾಲಕ್ಕೆ ತೆರಿಗೆ ಪಾವತಿಸುವಂತಾಗಿದೆ" ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ಮಾಜಿ ಅಧ್ಯಕ್ಷ ಜೆ.ಬಿ. ಮಹಾಪಾತ್ರ ಹೇಳಿದ್ದಾರೆ.
AIS ಎಂದರೇನು?:ಆದಾಯ ತೆರಿಗೆ ಇಲಾಖೆಯೊಂದಿಗೆ ಬ್ಯಾಂಕ್‌ಗಳು, ಆರ್‌ಟಿಒಗಳು, ಸ್ಟಾಕ್ ಎಕ್ಸ್‌ಚೇಂಜ್‌ಗಳು ಇತ್ಯಾದಿಗಳು ವರದಿ ಮಾಡಿದ ಹಣಕಾಸಿನ ವಹಿವಾಟುಗಳ ಮಾಹಿತಿಯನ್ನು ಈ ವರದಿ ಒಳಗೊಂಡಿರುತ್ತದೆ. ಎಐಎಸ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ:
ಭಾಗ A ಇದು ಹೆಸರು, ಪ್ಯಾನ್, ಆಧಾರ್ ಸಂಖ್ಯೆ, ಜನ್ಮ ದಿನಾಂಕ, ಇತ್ಯಾದಿ ಸೇರಿದಂತೆ ತೆರಿಗೆದಾರರ ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.
ಭಾಗ B ಮೂಲದಲ್ಲಿ ತೆರಿಗೆ ಕಡಿತ (TDS), ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆ (TCS), 53 ನಿಗದಿತ ಹಣಕಾಸು ವಹಿವಾಟುಗಳು, ತೆರಿಗೆ ಪಾವತಿ, ಸ್ಥಾವರ ಮತ್ತು ಯಂತ್ರಗಳ ಮೇಲಿನ ಬಾಡಿಗೆ, ಲಾಟರಿ, ಕ್ರಾಸ್‌ವರ್ಡ್ ಪಜಲ್ ಅಥವಾ ಕುದುರೆ ರೇಸ್‌ನಿಂದ ಬಂದ ಗೆಲುವುಗಳು, ಭವಿಷ್ಯ ನಿಧಿ ಬಡ್ಡಿ, ಬಾಂಡ್‌ಗಳಿಂದ ಬಡ್ಡಿ, ಸರ್ಕಾರಿ ಭದ್ರತೆಗಳು, ಕಡಲಾಚೆಯ ನಿಧಿ, ಭಾರತೀಯ ಕಂಪನಿಗಳ ಷೇರುಗಳು, ವಿಮಾ ಕಮೀಷನ್, ಮತ್ತು ಬೇಡಿಕೆ ಮತ್ತು ಮರುಪಾವತಿ ಮುಂತಾದವುಗಳನ್ನು ಒಳಗೊಂಡಿರುತ್ತದೆ.
ಐಟಿ ಇಲಾಖೆಯು ಎಐಎಸ್ ನ ಮತ್ತಷ್ಟು ಸುಧಾರಿತ ಆವೃತ್ತಿ 2.0 ಅನ್ನು ಮಾರ್ಚ್ 2022 ರಲ್ಲಿ ಬಿಡುಗಡೆ ಮಾಡಿತು. ಬಡ್ಡಿ, ಲಾಭಾಂಶ, ಸೆಕ್ಯೂರಿಟೀಸ್, ಮ್ಯೂಚುವಲ್ ಫಂಡ್ ವಹಿವಾಟುಗಳು ಇತ್ಯಾದಿ ಸೇರಿದಂತೆ ಇನ್ನೂ ಹಲವಾರು ವಹಿವಾಟುಗಳನ್ನು ಇದು ಒಳಗೊಂಡಿದೆ. ಹೊಸ ಆವೃತ್ತಿಯಲ್ಲಿ, ಪ್ಯಾನ್ ನಮೂದಿಸದೆ ಮಾಡಲಾದ ವಹಿವಾಟನ್ನು ದಾಖಲಿಸಲು ಡೇಟಾ ವಿಶ್ಲೇಷಣೆಯ ತಂತ್ರಜ್ಞಾನವನ್ನು ಬಳಸಲಾಗಿದೆ. ಅಲ್ಲದೆ ಈಗ ತೆರಿಗೆದಾರರು ವರದಿ ವೀಕ್ಷಿಸಲು ಮತ್ತು ಪ್ರತಿಕ್ರಿಯೆ ಅಪ್‌ಲೋಡ್ ಮಾಡಲು ಎಐಎಸ್ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಬಹುದು.
ಎಐಎಸ್ ಸ್ಟೇಟ್ಮೆಂಟ್ ನೋಡಲು ತೆರಿಗೆದಾರರು ಐಟಿ ಇ-ಫೈಲಿಂಗ್ ವೆಬ್‌ಸೈಟ್ www.incometax.gov.in ಗೆ ಲಾಗ್ ಇನ್ ಮಾಡಬೇಕು. ಸೇವೆಗಳ ಟ್ಯಾಬ್ ಅಡಿಯಲ್ಲಿ, ಎಐಎಸ್ ಆಯ್ಕೆ ಮಾಡಬೇಕು.