ನವದೆಹಲಿ:ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2022-23ರ ಆರ್ಥಿಕ ವರ್ಷದ ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಶೇ 7.4ಕ್ಕೆ ಕಡಿತಗೊಳಿಸಿದೆ. ಈ ಮೂಲಕ ಬೆಳವಣಿಗೆ ದರವನ್ನು ಶೇಕಡಾ 0.8 ರಷ್ಟು ಕಡಿಮೆ ಮಾಡಲಾಗಿದೆ.
ಹಣಕಾಸು ವರ್ಷ 2023ಕ್ಕೆ ಈ ಹಿಂದೆ ಐಎಂಎಫ್ ಶೇ 8.2ರಷ್ಟು ಆರ್ಥಿಕ ಬೆಳವಣಿಗೆ ದರದ ಮುನ್ಸೂಚನೆ ನೀಡಿತ್ತು. ಅದಕ್ಕೆ ಹೋಲಿಸಿದರೆ ಈಗಿನ ಪರಿಷ್ಕೃತ ಬೆಳವಣಿಗೆ ದರ ಗಮನಾರ್ಹವಾಗಿ ಕಡಿಮೆಯಾಗಿದೆ. ಆದಾಗ್ಯೂ ಆರ್ಬಿಐನ ಅಂದಾಜು ಬೆಳವಣಿಗೆ ದರ ಶೇ 7.2 ಕ್ಕೆ ಹೋಲಿಸಿದರೆ, ಐಎಂಎಫ್ ನಿರೀಕ್ಷೆ ಮಾಡಿರುವ ದರ ಕೊಂಚ ಹೆಚ್ಚಾಗಿದೆ.
ಇತ್ತೀಚೆಗೆ ಐಎಂಎಫ್ ಪ್ರಕಟಿಸಿದ ವಿಶ್ವ ಆರ್ಥಿಕ ಮುನ್ನೋಟ ವರದಿಯ ಪ್ರಕಾರ- ಹಣಕಾಸು ವರ್ಷ 2023-24ಕ್ಕೆ ಭಾರತದ ಆರ್ಥಿಕತೆಯು ಶೇ 6.1 ರಷ್ಟು ಬೆಳವಣಿಗೆ ಕಾಣಲಿದೆ ಎಂದು ತಿಳಿಸಲಾಗಿದೆ. ಭಾರತ ಎದುರಿಸುತ್ತಿರುವ ಪ್ರತಿಕೂಲ ಬಾಹ್ಯ ಪರಿಸ್ಥಿತಿಗಳು ಹಾಗೂ ತೀವ್ರಗತಿಯಲ್ಲಿ ಬಿಗಿಯಾಗುತ್ತಿರುವ ನೀತಿ ನಿಯಮಗಳ ಆಧಾರದಲ್ಲಿ ಆರ್ಥಿಕ ಬೆಳವಣಿಗೆ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಬೆಳವಣಿಗೆ ಹೊಂದಿದ ದೇಶಗಳಾದ ಚೀನಾ ಹಾಗೂ ಅಮೆರಿಕಗಳಿಗಿಂತ ಹೆಚ್ಚಿನ ವೇಗದಲ್ಲಿ ಭಾರತದ ಆರ್ಥಿಕತೆ ಪ್ರಗತಿ ಸಾಧಿಸಲಿದೆ.
ವಿಶ್ವ ಆರ್ಥಿಕ ಬೆಳವಣಿಗೆಯ ವೇಗ ಕುಂಠಿತ:ಚೀನಾ ಹಾಗೂ ಅಮೆರಿಕಗಳಲ್ಲಿ ಎದುರಾಗಿರುವ ಹಣದುಬ್ಬರದ ಏರಿಕೆ ಮತ್ತು ತೀವ್ರವಾದ ಆರ್ಥಿಕ ಕುಸಿತದ ಕಾರಣಗಳಿಂದ ಎರಡೂ ದೇಶಗಳ ನಿರೀಕ್ಷಿತ ಆರ್ಥಿಕ ಬೆಳವಣಿಗೆ ದರವನ್ನು ಕಡಿಮೆ ಮಾಡಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಈ ದೇಶಗಳ ಆರ್ಥಿಕ ಸ್ಥಿತಿ ಗಂಭಿರವಾಗುವ ಎಚ್ಚರಿಕೆಯನ್ನೂ ನೀಡಲಾಗಿದೆ.
2022ರ ಗ್ಲೋಬಲ್ ಜಿಡಿಪಿ ಅಂದಾಜನ್ನು ಶೇ 3.2ಕ್ಕೆ ಕಡಿತ ಮಾಡಲಾಗಿದೆ. ಇದು ಏಪ್ರಿಲ್ ಅಂದಾಜಿಗಿಂತ ಹತ್ತರಲ್ಲಿನ ನಾಲ್ಕು ಅಂಶಗಳಷ್ಟು ಕಡಿಮೆ ಹಾಗೂ ಕಳೆದ ವರ್ಷದ ದರಕ್ಕಿಂತ ಅರ್ಧದಷ್ಟಿದೆ. ಲಾಕ್ಡೌನ್ ನಂತರ ಕಳೆದ ವರ್ಷ ಕಂಡು ಬಂದಿದ್ದ ತಾತ್ಕಾಲಿಕ ಚೇತರಿಕೆಯ ನಂತರ ಈಗ 2022ರಲ್ಲಿ ನಿಜವಾದ ಅಪಾಯಗಳು ಕಾಣಲಾರಂಭಿಸಿವೆ. ಸಾಂಕ್ರಾಮಿಕ ರೋಗದಿಂದ ಈಗಾಗಲೇ ದುರ್ಬಲಗೊಂಡಿರುವ ವಿಶ್ವದ ಆರ್ಥಿಕತೆ ಹಲವಾರು ಆಘಾತಗಳನ್ನು ಎದುರಿಸಿದೆ. ಉಕ್ರೇನ್‌ನಲ್ಲಿನ ಯುದ್ಧ ಸೇರಿದಂತೆ ಆಹಾರ ಮತ್ತು ಇಂಧನಗಳ ಬೆಲೆಗಳು ಜಾಗತಿಕ ಮಟ್ಟದಲ್ಲಿ ಹೆಚ್ಚಾಗಿವೆ, ಕೇಂದ್ರ ಬ್ಯಾಂಕುಗಳು ಬಡ್ಡಿದರಗಳನ್ನು ತೀವ್ರವಾಗಿ ಹೆಚ್ಚಿಸಲು ಪ್ರೇರೇಪಿಸಿವೆ ಎಂದು ಐಎಂಎಫ್ ಹೇಳಿದೆ.