ಬೆಂಗಳೂರು :ವಿಶ್ವದ ಆರ್ಥಿಕ ಪರಿಸ್ಥಿತಿಯು ಪ್ರಸ್ತುತ ಕಳೆದ ಮೂರು ದಶಕಗಳಲ್ಲೇ ಅತ್ಯಂತ ದುರ್ಬಲ ಸ್ಥಿತಿಯಲ್ಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಕೆ ಹೇಳಿದ್ದು, ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಆರ್ಥಿಕ ದೃಷ್ಟಿಕೋನದ ಬಗ್ಗೆ ಎಚ್ಚರಿಕೆ ನೀಡಿದೆ. ಭೌಗೋಳಿಕ ರಾಜಕೀಯ ಒತ್ತಡದಿಂದ ಉಂಟಾಗುವ ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು ರಾಷ್ಟ್ರಗಳನ್ನು ಒತ್ತಾಯಿಸಿರುವ ಐಎಂಎಫ್ ಉತ್ಪಾದಕತೆಯನ್ನು ಹೆಚ್ಚಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದೆ.
ವರದಿಯ ಪ್ರಕಾರ, ಹೆಚ್ಚಿನ ಬಡ್ಡಿದರಗಳ ಕಾರಣದಿಂದ ಮುಂದಿನ ಅರ್ಧ ದಶಕದಲ್ಲಿ ವಿಶ್ವದ ಆರ್ಥಿಕತೆಯು ಕೇವಲ ಸುಮಾರು 3 ಪ್ರತಿಶತದಷ್ಟು ವಿಸ್ತರಿಸಬಹುದು ಎಂದು ಐಎಂಎಫ್ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಗುರುವಾರ ವಾಷಿಂಗ್ಟನ್ನಲ್ಲಿ ತಿಳಿಸಿದ್ದಾರೆ. ಇದು 1990 ರ ನಂತರ ಅತಿ ಕಡಿಮೆ ಪ್ರಮಾಣದ ಮಧ್ಯಮ ಅವಧಿಯ ಬೆಳವಣಿಗೆಯ ಮುನ್ಸೂಚನೆಯಾಗಿದೆ ಮತ್ತು ಕಳೆದ ಎರಡು ದಶಕಗಳಿಂದ ಐದು ವರ್ಷಗಳ ಸರಾಸರಿ ಬೆಳವಣಿಗೆ ದರವಾಗಿರುವ ಶೇಕಡಾ 3.8 ಕ್ಕಿಂತ ಕಡಿಮೆಯಾಗಿದೆ.
ಜಾಗತಿಕ ಒಟ್ಟು ದೇಶೀಯ ಉತ್ಪನ್ನವು ಶೇಕಡಾ 3 ಕ್ಕಿಂತ ಕಡಿಮೆಯಿರುವ ಸಾಧ್ಯತೆಯಿದೆ. ಇದು ಐಎಂಎಫ್ನ ಜನವರಿಯ ಮುನ್ಸೂಚನೆಯಾಗಿದ್ದ ಶೇ 2.9ಕ್ಕೆ ಅನುಗುಣವಾಗಿದೆ ಎಂದು ಕ್ರಿಸ್ಟಲಿನಾ ಜಾರ್ಜಿವಾ ತಿಳಿಸಿದ್ದಾರೆ. ಬಿಗಿಯಾದ ವಿತ್ತೀಯ ನೀತಿಗಳ ಕಾರಣದಿಂದ ಬೇಡಿಕೆಗಳು ಕಡಿಮೆಯಾಗುತ್ತವೆ ಮತ್ತು ಅಮೆರಿಕ - ಯೂರೋಪಿಯನ್ ದೇಶಗಳಲ್ಲಿ ಆರ್ಥಿಕ ಚಟುವಟಿಕೆಯು ನಿಧಾನಗೊಳ್ಳುವುದರಿಂದ ಸುಮಾರು ಶೇ 90 ರಷ್ಟು ಮುಂದುವರಿದ ಆರ್ಥಿಕತೆಗಳ ಬೆಳವಣಿಗೆ ಈ ವರ್ಷ ನಿಧಾನಗೊಳ್ಳಲಿದೆ ಎಂದು ಐಎಂಎಫ್ ಹೇಳಿದೆ. ವಿಶ್ವಬ್ಯಾಂಕ್ನೊಂದಿಗೆ ನಡೆದ ಚಳಿಗಾಲದ ಸಭೆಗಳ ಭಾಗವಾಗಿ ಐಎಂಎಫ್ ಏಪ್ರಿಲ್ 11 ರಂದು ಹೆಚ್ಚು ವಿವರವಾದ ವರ್ಲ್ಡ್ ಎಕನಾಮಿಕ್ ಔಟ್ಲುಕ್ ವರದಿಯನ್ನು ಬಿಡುಗಡೆ ಮಾಡಲು ಯೋಜಿಸಿದೆ.