ಹೈದರಾಬಾದ್: ಈಗ ಎಲ್ಲೆಲ್ಲೂ ಡಿಜಿಟಲ್ ಪಾವತಿಗಳು ಹೆಚ್ಚಾಗುತ್ತಿದ್ದರೂ, ದೊಡ್ಡ ಪ್ರಮಾಣದ ಪಾವತಿಗೆ ಈಗಲೂ ಚೆಕ್ಗಳನ್ನೇ ಬಳಸಲಾಗುತ್ತಿದೆ. ಆದರೆ ಚೆಕ್ ಮೇಲೆ ನಮೂದಿಸಲಾದ ಮೊತ್ತವನ್ನು ಅಥವಾ ಸಹಿಯನ್ನು ತಿದ್ದುವುದು ಹಾಗೂ ಆ ಮೂಲಕ ಫೋರ್ಜರಿ ಮಾಡುವ ಸಮಸ್ಯೆಗಳು ಸವಾಲಾಗಿ ಉಳಿದಿವೆ. ಈಗ ಈ ವಂಚನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಸಿಟಿವ್ ಪೇ ಸಿಸ್ಟಮ್ (ಧನಾತ್ಮಕ ಪಾವತಿ ವ್ಯವಸ್ಥೆ) (Positive Pay System -PPS) ಎಂಬ ಹೊಸ ವ್ಯವಸ್ಥೆಯೊಂದನ್ನು ಪರಿಚಯಿಸಲಾಗಿದೆ. ಇದರಿಂದ ಚೆಕ್ ವ್ಯವಹಾರಗಳು ಮತ್ತಷ್ಟು ಸುರಕ್ಷಿತವಾಗಲಿವೆ.
ಹೊಸ ವ್ಯವಸ್ಥೆಯ ಪ್ರಕಾರ- ಚೆಕ್ ನಲ್ಲಿ ನಮೂದಿಸಲಾದ ಮೊತ್ತ ಹಾಗೂ ಯಾರ ಹೆಸರಿಗೆ ಚೆಕ್ ನೀಡಲಾಗಿದೆ ಎಂಬ ವಿವರಗಳನ್ನು ಮೊದಲೇ ಬ್ಯಾಂಕಿಗೆ ನೀಡಬೇಕಾಗುತ್ತದೆ. ಹೀಗೆ ಚೆಕ್ ಮಾಹಿತಿ ನೀಡದಿದ್ದರೆ ಅಂಥ ಚೆಕ್‌ಗಳನ್ನು ಬ್ಯಾಂಕ್ ಪಾಸ್ ಮಾಡುವುದಿಲ್ಲ.
5 ಲಕ್ಷ ರೂಪಾಯಿ ಅಥವಾ ಅದಕ್ಕೂ ಹೆಚ್ಚಿನ ಮೊತ್ತದ ಚೆಕ್‌ಗಳನ್ನು ಕ್ಲಿಯರ್ ಮಾಡುವ ಮುನ್ನ ಬ್ಯಾಂಕ್ಗಳು ಗ್ರಾಹಕರಿಂದ ಪಾಸಿಟಿವ್ ಪೇ ಸಿಸ್ಟಮ್ ಖಾತರಿಯನ್ನು ಪಡೆದುಕೊಳ್ಳುತ್ತವೆ. ಈ ನಿಯಮಗಳು ಆಗಸ್ಟ್ 1 ರಿಂದಲೇ ಜಾರಿಯಾಗಿವೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಈ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದೆ. ಇದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದೆ. ಚೆಕ್ ಪಾವತಿಯಲ್ಲಿ ಭದ್ರತೆಯನ್ನು ಹೆಚ್ಚಿಸಲು ಮತ್ತು ಚೆಕ್ ಟ್ಯಾಂಪರಿಂಗ್ ನಿಂದ ವಂಚನೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್ ಬಿಐ ತಿಳಿಸಿದೆ. ಗ್ರಾಹಕರು ಎಲ್ಲಾ ಚೆಕ್‌ಗಳಿಗೆ ಈ ಸೌಲಭ್ಯವನ್ನು ಬಳಸುವ ವಿವೇಚನೆಯನ್ನು ಹೊಂದಿರುತ್ತಾರೆ. ಆದಾಗ್ಯೂ, 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಇದು ಕಡ್ಡಾಯವಾಗಿದೆ.