ನೀವು ಆದಾಯ ತೆರಿಗೆ(ಐಟಿ) ವ್ಯಾಪ್ತಿಗೆ ಬಂದಿದ್ದೀರಾ?, ನಿಮ್ಮ ಕಂಪನಿಯು ನಿಮ್ಮ ಸಂಬಳದ ಮೂಲದಲ್ಲಿ ತೆರಿಗೆ (ಟಿಡಿಎಸ್) ಕಡಿತಗೊಳಿಸುತ್ತದೆಯೇ?, ಹಾಗಿದ್ದರೆ ನೀವು ಆದಾಯ ತೆರಿಗೆ ರಿಟರ್ನ್ಸ್(ಐಟಿಆರ್) ಸಲ್ಲಿಸಬೇಕಿರುತ್ತದೆ. ರಿಟರ್ನ್ಸ್ ಸಲ್ಲಿಸದಿದ್ದರೆ ಏನಾಗುತ್ತದೆ? ಎಂಬುದು ಅನೇಕರ ಪ್ರಶ್ನೆ. ಇದಕ್ಕೆ ಇಲ್ಲಿದೆ ಉತ್ತರ.
ಕಳೆದ ಹಣಕಾಸು ವರ್ಷ ಅಂದರೆ 2022-23 ರ ರಿಟರ್ನ್ಸ್ ಫೈಲ್ ಮಾಡುವ ಸಮಯ ಸಮೀಪಿಸುತ್ತಿದೆ. ಸಾಮಾನ್ಯವಾಗಿ ಆದಾಯ ತೆರಿಗೆ ಇಲಾಖೆ ಈ ಪ್ರಕ್ರಿಯೆಯನ್ನು ಜುಲೈ 31 ರೊಳಗೆ ಪೂರ್ಣಗೊಳಿಸಲು ಹೇಳುತ್ತದೆ. ಆದರೆ, ಕೆಲವು ವಿಶೇಷ ಸಂದರ್ಭಗಳಲ್ಲಿ ಈ ಗಡುವನ್ನು ವಿಸ್ತರಿಸುತ್ತದೆ.
* ಮರುಪಾವತಿ ಪಡೆಯುವುದು ಹೇಗೆ?: ನೀವು ಮೂಲದಲ್ಲಿ ಹೆಚ್ಚುವರಿ ತೆರಿಗೆ ಕಡಿತ ಹೊಂದಿದ್ದೀರಿ ಎಂದಿಟ್ಟುಕೊಳ್ಳಿ. ನಿಯಮಗಳ ಪ್ರಕಾರ, ಆ ಮೊತ್ತವನ್ನು ಮರುಪಾವತಿ ರೂಪದಲ್ಲಿ ಪಡೆಯಲು ಅವಕಾಶವಿದೆ. ನಿಗದಿತ ದಿನಾಂಕಕ್ಕೆ ಮೊದಲು ರಿಟರ್ನ್ಸ್ ಸಲ್ಲಿಸಿದರೆ ಆದಾಯ ತೆರಿಗೆ ಇಲಾಖೆಯು ಬಡ್ಡಿ ಸೇರಿದಂತೆ ಮೊತ್ತ ಪಾವತಿಸುತ್ತದೆ. ನೀವು ತೆರಿಗೆಯನ್ನು ನಿಗದಿತ ಕಾಲವಧಿಯಲ್ಲಿ ಪಾವತಿಸಬೇಕು. ಒಂದು ವೇಳೆ ತಪ್ಪಿಸಿಕೊಂಡರೆ ಬಡ್ಡಿ ಮತ್ತು ದಂಡ ಅನ್ವಯಿಸುತ್ತದೆ.
* ಸಾಲ ಪಡೆಯಲು ಅವಕಾಶ: ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಕನಿಷ್ಠ 3 ವರ್ಷಗಳ ತೆರಿಗೆ ರಿಟರ್ನ್‌ಗಳನ್ನು ನಿಮಗೆ ಸಾಲ ನೀಡಲು ಆದಾಯದ ಪುರಾವೆಯಾಗಿ ಕೇಳುತ್ತವೆ. ಆದ್ದರಿಂದ, ವಾರ್ಷಿಕವಾಗಿ ರಿಟರ್ನ್ಸ್ ಸಲ್ಲಿಸಬೇಕು. ಯಾವುದೇ ರಿಟರ್ನ್ಸ್ ಇಲ್ಲದಿದ್ದರೆ, ಗೃಹ ಸಾಲವನ್ನು ತೆಗೆದುಕೊಳ್ಳುವುದು ಕಷ್ಟವಾಗುತ್ತದೆ.