ನವದೆಹಲಿ:ತಾವು ಸಹ ಮಧ್ಯಮವರ್ಗದಿಂದಲೇ ಬಂದವರಾಗಿರುವುದರಿಂದ ಮಧ್ಯಮ ವರ್ಗದ ಜನತೆ ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಸಂವೇದನಾಶೀಲರಾಗಿದ್ದೇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆರ್‌ಎಸ್‌ಎಸ್ ಮುಖವಾಣಿ ಪಾಂಚಜನ್ಯ ಪ್ರಕಟಣೆಯ 75ನೇ ವರ್ಷದ ನಿಮಿತ್ತ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ವಿತ್ತ ಸಚಿವರು, ಮಧ್ಯಮ ವರ್ಗದವಳಾದ ನನಗೆ ಅವರ ಮೇಲಿನ ಒತ್ತಡಗಳ ಬಗ್ಗೆ ತಿಳಿದಿತ್ತು. ಮತ್ತು ಹೀಗಾಗಿಯೇ ಸರ್ಕಾರ ಅವರ ಮೇಲೆ ಯಾವುದೇ ಹೊಸ ತೆರಿಗೆಯನ್ನು ವಿಧಿಸಿಲ್ಲ ಎಂದು ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇದುವರೆಗೆ ಯಾವುದೇ ಬಜೆಟ್‌ನಲ್ಲಿ ಮಧ್ಯಮ ವರ್ಗದ ಮೇಲೆ ಯಾವುದೇ ಹೊಸ ತೆರಿಗೆ ವಿಧಿಸಿಲ್ಲ. 5 ಲಕ್ಷದವರೆಗೆ ಆದಾಯ ಹೊಂದಿರುವ ಜನರ ಮೇಲೆ ಯಾವುದೇ ತೆರಿಗೆಯನ್ನು ವಿಧಿಸಿಲ್ಲ ಎಂದು ಸೀತಾರಾಮನ್ ಕಾರ್ಯಕ್ರಮದ ವೇಳೆ ಹೇಳಿದರು. ಫೆಬ್ರವರಿ 1 ರಂದು 2023-24 ರ ಕೇಂದ್ರ ಬಜೆಟ್ ಅನ್ನು ಮಂಡಿಸುವ ಕೆಲವೇ ದಿನಗಳ ಮೊದಲು ಬಂದಿರುವ ಅವರ ಈ ಹೇಳಿಕೆಗಳು ಗಮನಾರ್ಹ.
ಸಂವಾದ ಸಹಿತ ನಡೆದ ಕಾರ್ಯಕ್ರಮದಲ್ಲಿ, ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವರು, ಪ್ರತಿಯೊಬ್ಬರೂ ಈ ವಿಷಯದಲ್ಲಿ ಪರಸ್ಪರರನ್ನು ಮೀರಿಸಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು. ಜನರು ಉಚಿತ ಕೊಡುಗೆಗಳ ಬಗ್ಗೆ ಮಾತನಾಡುವ ಮೂಲಕ ಒಬ್ಬರನ್ನೊಬ್ಬರು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಾರೆ. ಆದರೆ, ಏನನ್ನು ನೀವು ಉಚಿತವಾಗಿ ಕೊಡುತ್ತಿರುವಿರಿ ಎಂಬುದು ವಿಷಯವಲ್ಲ. ನೀವು ಆ ಉಚಿತ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದೇ ಮುಖ್ಯ ಸಮಸ್ಯೆ ಎಂದು ಅವರು ಹೇಳಿದರು.