ಸಿಯೋಲ್ :ದಕ್ಷಿಣ ಕೊರಿಯಾದ ಅಗ್ರಗಣ್ಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಚೀನಾದಲ್ಲಿನ ತನ್ನ ಘಟಕಗಳಲ್ಲಿ ಒಂದನ್ನು ಮಾರಾಟ ಮಾಡಿದೆ. ವಿಶ್ವದ ಅತಿದೊಡ್ಡ ವಾಹನ ಮಾರುಕಟ್ಟೆಯಲ್ಲಿ ವ್ಯವಹಾರ ಮರುಸಂಘಟನೆ ಕಾರ್ಯತಂತ್ರದ ಭಾಗವಾಗಿ ಕಂಪನಿ ಈ ಕ್ರಮಕ್ಕೆ ಮುಂದಾಗಿದೆ.
ಚೀನಾದ ಬೀಜಿಂಗ್ ಬಿಎಐಸಿ ಮೋಟಾರ್ ಜೊತೆಗಿನ ಹ್ಯುಂಡೈನ ಜಂಟಿ ಉದ್ಯಮವಾದ ಹ್ಯುಂಡೈ ಮೋಟಾರ್ ಕಳೆದ ವರ್ಷದ ಕೊನೆಯಲ್ಲಿ ಚಾಂಗ್ ಕಿಂಗ್ ಘಟಕವನ್ನು ಮಧ್ಯ ಚೀನಾದ ನಗರ ಮೂಲದ ಕೈಗಾರಿಕಾ ಪಾರ್ಕ್ ಡೆವಲಪರ್ಗೆ ಸುಮಾರು 296 ಬಿಲಿಯನ್ ವೋನ್ (221 ಮಿಲಿಯನ್ ಡಾಲರ್) ಗೆ ಮಾರಾಟ ಮಾಡಿದೆ ಎಂದು ಹ್ಯುಂಡೈ ಮೋಟಾರ್ ತಿಳಿಸಿದೆ.
ವಾರ್ಷಿಕ 3,00,000 ಯುನಿಟ್ ಸಾಮರ್ಥ್ಯದ ಈ ಸ್ಥಾವರವು 2017 ರಲ್ಲಿ ಆನ್ ಲೈನ್ ಮೂಲಕ ಕಾರು ಮಾರಾಟ ಆರಂಭಿಸಿತ್ತು. ಆದರೆ, ನಿಧಾನಗತಿಯ ಬೇಡಿಕೆಯ ಮಧ್ಯೆ ಕಳೆದ ವರ್ಷ ಜೂನ್ನಲ್ಲಿ ಕಂಪನಿಯನ್ನು ಮಾರಾಟಕ್ಕೆ ಇಡಲಾಯಿತು ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹ್ಯುಂಡೈ ಮೋಟಾರ್ ಚೀನಾದಲ್ಲಿ ವ್ಯವಹಾರ ದಕ್ಷತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಮತ್ತು ಉತ್ಪಾದನೆಯನ್ನು ತರ್ಕಬದ್ಧಗೊಳಿಸುವ ಮೂಲಕ ಲಾಭ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2016 ರಲ್ಲಿ ಚೀನಾದಲ್ಲಿ ಹ್ಯುಂಡೈ ಕಾರುಗಳ ಮಾರಾಟ ಸಂಖ್ಯೆ 1.14 ಮಿಲಿಯನ್ಗೆ ತಲುಪಿತ್ತು. ಆದರೆ, ದಕ್ಷಿಣ ಕೊರಿಯಾದಲ್ಲಿ ಅಮೆರಿಕ ಕ್ಷಿಪಣಿ ವಿರೋಧಿ ವ್ಯವಸ್ಥೆಯನ್ನು ನಿಯೋಜಿಸುವ ಬಗ್ಗೆ ಸಿಯೋಲ್ ಮತ್ತು ಬೀಜಿಂಗ್ ನಡುವಿನ ರಾಜತಾಂತ್ರಿಕ ವಿವಾದದಿಂದಾಗಿ 2017 ರಿಂದ ಹ್ಯುಂಡೈ ಕಾರುಗಳ ಮಾರಾಟ ಕುಸಿತವಾಗಿದೆ.
ಹ್ಯುಂಡೈ ಮೋಟಾರ್ ತನ್ನ ಉತ್ತುಂಗದಲ್ಲಿ ಚೀನಾದಲ್ಲಿ ಐದು ಘಟಕಗಳನ್ನು ಹೊಂದಿತ್ತು. ಆದರೆ, ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ 2021 ರಲ್ಲಿ ತನ್ನ ಬೀಜಿಂಗ್ ಕಾರ್ಖಾನೆಯನ್ನು ಮಾರಾಟ ಮಾಡಿತ್ತು. ಕಂಪನಿಯು ತನ್ನ ವ್ಯವಹಾರ ಮರುಸಂಘಟನೆ ಕಾರ್ಯತಂತ್ರಕ್ಕೆ ಅನುಗುಣವಾಗಿ ದಕ್ಷಿಣ ಚೀನಾದ ನಗರ ಚಾಂಗ್ಝೌನಲ್ಲಿರುವ ತನ್ನ ಘಟಕವನ್ನು ಮಾರಾಟ ಮಾಡಲು ಯೋಜಿಸಿದೆ ಎಂದು ವರದಿಯಾಗಿದೆ.
ಡೀಸೆಲ್ ಚಾಲಿತ ವಾಹನಗಳ ಮಾರಾಟ ಇಳಿಕೆ ಸಾಧ್ಯತೆ: ಹ್ಯುಂಡೈ ಮೋಟಾರ್ ಕಂಪನಿಯ ಭಾರತ ವಿಭಾಗವು ತನ್ನ ಡೀಸೆಲ್ ಎಂಜಿನ್ ಚಾಲಿತ ವಾಹನಗಳ ಮಾರಾಟವು 2024 ರಲ್ಲಿ ಸುಮಾರು 30 ರಿಂದ 35% ಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹ್ಯುಂಡೈ ಮೋಟಾರ್ ಇಂಡಿಯಾ 2024 ರಲ್ಲಿ ತನ್ನ ಮಾರಾಟದ ಶೇ 65 ರಷ್ಟು ಆದಾಯವನ್ನು ಸ್ಪೋರ್ಟ್ ಯುಟಿಲಿಟಿ ವಾಹನಗಳಿಂದ (ಎಸ್ ಯುವಿ) ಪಡೆಯಲಿದೆ. ಹ್ಯುಂಡೈ ಕಂಪನಿಯು ಮಂಗಳವಾರ ತನ್ನ ಹೆಚ್ಚು ಮಾರಾಟವಾದ ಮಧ್ಯಮ ಎಸ್ ಯುವಿ ಕ್ರೆಟಾದ ಸುಧಾರಿತ ಆವೃತ್ತಿಯನ್ನು 11 ಲಕ್ಷ ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ : ಹೈದರಾಬಾದ್ನಿಂದ ಜರ್ಮನಿಯ ಫ್ರಾಂಕ್ಫರ್ಟ್ಗೆ ಲುಫ್ತಾನ್ಸ್ ನೇರ ವಿಮಾನಯಾನ ಆರಂಭ