ನವದೆಹಲಿ:ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಬಿಲಿಯನೇರ್ ಮುಖೇಶ್ ಅಂಬಾನಿ ಒಂದು ವರ್ಷದ ನಂತರ '360 ಒನ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2023' ನ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮರಳಿ ಪಡೆದಿದ್ದಾರೆ. ಅಂಬಾನಿ 8,08,800 ಕೋಟಿ ರೂ.ಗಳ ಸಂಪತ್ತಿನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅವರ ಸಂಪತ್ತು ಶೇಕಡಾ 2 ರಷ್ಟು ಹೆಚ್ಚಳವಾಗಿದೆ.
ಕೈಗಾರಿಕೋದ್ಯಮಿ ಗೌತಮ್ ಅದಾನಿ 4,74,800 ಕೋಟಿ ರೂ.ಗಳ ಸಂಪತ್ತಿನೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅದಾನಿ ಅಂಬಾನಿಗಿಂತ 3 ಲಕ್ಷ ಕೋಟಿ ರೂ.ಗಳಷ್ಟು ಮುಂದಿದ್ದರು. ಲಸಿಕೆ ತಯಾರಕ ಸೈರಸ್ ಎಸ್ ಪೂನಾವಾಲಾ (278,500 ಕೋಟಿ ರೂ.), ಎಚ್ಸಿಎಲ್ ಗ್ರೂಪ್ನ ಶಿವ ನಾಡಾರ್ (228,900 ಕೋಟಿ ರೂ.), ಹಿಂದೂಜಾ ಗ್ರೂಪ್ನ ಗೋಪಿಚಂದ್ ಹಿಂದೂಜಾ (176,500 ಕೋಟಿ ರೂ.) ಮತ್ತು ಸನ್ ಫಾರ್ಮಾಸ್ಯುಟಿಕಲ್ಸ್ನ ದಿಲೀಪ್ ಶಾಂಘ್ವಿ (164,300 ಕೋಟಿ ರೂ.) ಇವರು ಅಂಬಾನಿ ಹಾಗೂ ಅದಾನಿ ನಂತರದ ಸ್ಥಾನಗಳಲ್ಲಿದ್ದಾರೆ.
ವರದಿಯ ಪ್ರಕಾರ, 1,000 ಕೋಟಿ ರೂ.ಗಳ ಶ್ರೀಮಂತ ವ್ಯಕ್ತಿಗಳ ಕ್ಲಬ್ 216 ರಿಂದ 1,319 ಕ್ಕೆ ಏರಿದೆ. ಭಾರತದ ಶ್ರೀಮಂತರ ಪಟ್ಟಿಯ ಸಂಚಿತ ಸಂಪತ್ತು 109 ಲಕ್ಷ ಕೋಟಿ ರೂ.ಗಳಾಗಿದ್ದು, ಇದು ಸಿಂಗಾಪುರ್, ಯುಎಇ ಮತ್ತು ಸೌದಿ ಅರೇಬಿಯಾದ ಸಂಯೋಜಿತ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಗಿಂತ ಹೆಚ್ಚಾಗಿದೆ. ಜೆಪ್ಟೊ ಸ್ಥಾಪಕ 20 ವರ್ಷದ ಕೈವಲ್ಯ ವೋಹ್ರಾ ಅತ್ಯಂತ ಕಿರಿಯ ಶ್ರೀಮಂತ ಭಾರತೀಯ ವ್ಯಕ್ತಿಯ ಗರಿಮೆಗೆ ಪಾತ್ರರಾಗಿದ್ದಾರೆ.