ಯಾವುದೇ ಪ್ರಯತ್ನದಲ್ಲಿ ಯಶಸ್ವಿಯಾಗಲು ವ್ಯಕ್ತಿಯು ಒಂದು ನಿರ್ದಿಷ್ಟ ತಂತ್ರ ಮತ್ತು ಯೋಜನೆ ಹೊಂದಿರಬೇಕಾಗುತ್ತದೆ. ನಾವೀಗ ಎಲ್ಲಿದ್ದೇವೆ, ನಾವು ಎಲ್ಲಿಗೆ ತಲುಪಬೇಕು ಮತ್ತು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆ ವ್ಯವಸ್ಥಿತವಾಗಿ ಯೋಜನೆ ರೂಪಿಸಬೇಕು. ಜೊತೆಗೆ ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ನಿಮಗೆ ತಿಳಿದಿರಬೇಕು.
ಹಣಕಾಸಿನ ಗುರಿಯ ತಲುಪುವುದು ಹೇಗೆ? ನಿಮ್ಮ ಗುರಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಬರೆದುಕೊಳ್ಳಿ ಮತ್ತು ನಿಮಗೆ ಎಷ್ಟು ಹಣ ಬೇಕು, ಆ ಮೊತ್ತವನ್ನು ಸಂಗ್ರಹಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಅಂದಾಜು ಮಾಡಿಕೊಳ್ಳಿ. ಅಂತಿಮವಾಗಿ ಹೂಡಿಕೆಗಾಗಿ ಹಣವನ್ನು ಹೇಗೆ ನಿಯೋಜಿಸಬೇಕು ಎಂಬುದರ ಕುರಿತು ಮೊದಲೇ ಚಿಂತಿಸಿ. ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲವನ್ನೂ ಒಮ್ಮೆ ಕೂಲಂಕಷವಾಗಿ ಪರೀಕ್ಷಿಸಿ. ನೀವು ವ್ಯವಸ್ಥಿತವಾಗಿ ಎಲ್ಲವನ್ನೂ ಯೋಜಿಸಿದಾಗ ನಿಮ್ಮ ಹಣಕಾಸಿನ ಗುರಿ ಸಾಧಿಸುವುದು ಸುಲಭವಾಗುತ್ತದೆ.
ಶಿಸ್ತಿನಿಂದ ಯೋಜನೆ ರೂಪಿಸಿ: ಅಚ್ಚುಕಟ್ಟಾಗಿ ಶಿಸ್ತಿನಿಂದ ವ್ಯವಸ್ಥಿತ ಯೋಜನೆ ರೂಪಿಸಿದರೆ ಅರ್ಧ ಕೆಲಸ ಮುಗಿದಂತೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಯೋಜನೆಯನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಉಳಿದ ಕೆಲಸಗಳು ನಡೆಯುತ್ತವೆ. ಹೂಡಿಕೆ ಮತ್ತು ಉಳಿತಾಯವನ್ನು ಶಿಸ್ತಿನಿಂದ ಮಾಡಬೇಕು. ನೀವು ದೀರ್ಘಾವಧಿಯಲ್ಲಿ ಉತ್ತಮ ಸಂಪತ್ತು ಸೃಷ್ಟಿಸಲು ಬಯಸಿದ್ದೇ ಆದಲ್ಲಿ, ನೀವು ಎಷ್ಟು ಹೂಡಿಕೆ ಮಾಡುತ್ತೀರಿ ಎನ್ನುವುದಕ್ಕಿಂತ ನೀವು ಹೇಗೆ ಹೂಡಿಕೆ ಮಾಡುತ್ತೀರಿ ಎಂಬುದು ಬಹಳ ಮುಖ್ಯ. ವ್ಯವಸ್ಥಿತವಾಗಿ, ನಿಯಮಿತವಾಗಿ ಹೂಡಿಕೆ ಮಾಡುವ ಮೂಲಕ ಸಣ್ಣ ಮೊತ್ತದಿಂದ ಹೆಚ್ಚು ಲಾಭಾಂಶವನ್ನು ಪಡೆಯಬಹುದು ಎಂಬುದನ್ನು ಮರೆಯಬೇಡಿ
ಉದಾಹರಣೆಗೆ, ನೀವು ಪ್ರತಿ ತಿಂಗಳಿಗೆ 5,000 ರೂಪಾಯಿಗಳನ್ನು 10 ವರ್ಷಗಳವರೆಗೆ ಹೂಡಿಕೆ ಮಾಡುತ್ತೀರಿ ಎಂದು ಭಾವಿಸೋಣ. ಕನಿಷ್ಠ ಶೇ.12ರಷ್ಟು ವಾರ್ಷಿಕ ಆದಾಯದೊಂದಿಗೆ, ಒಟ್ಟು 6 ಲಕ್ಷ ರೂ. ಹೂಡಿಕೆಯು 11.6 ಲಕ್ಷಕ್ಕೆ ಹೆಚ್ಚಾಗುತ್ತದೆ. ಇದು ಹೂಡಿಕೆಯ ಮೊತ್ತಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚು. ನಿಯಮಿತವಾಗಿ ಹೂಡಿಕೆ ಮಾಡಿದಾಗ ಮಾತ್ರ ಅಂತಹ ಹೂಡಿಕೆಗಳು ಉತ್ತಮ ಫಲಿತಾಂಶಗಳನ್ನು ನೀಡಲು ಸಾಧ್ಯವಾಗುತ್ತದೆ.