ಹೈದರಾಬಾದ್: ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸಲು ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕಾಗಿ ಗಣನೀಯ ಹೂಡಿಕೆ ಮಾಡುತ್ತಾರೆ. ಸರ್ಕಾರಗಳು ಸಹ ತೆರಿಗೆ ಪಾವತಿದಾರರಿಗೆ ಮಕ್ಕಳ ಶಿಕ್ಷಣದ ವೆಚ್ಚದ ಮೇಲೆ ಹೆಚ್ಚಿನ ವಿನಾಯಿತಿಗಳನ್ನು ನೀಡುತ್ತವೆ. ಆರ್ಥಿಕ ವರ್ಷವು ಶೀಘ್ರದಲ್ಲೇ ಕೊನೆಗೊಳ್ಳಲಿರುವುದರಿಂದ ಈ ವಿನಾಯಿತಿಯನ್ನು ಸಂಪೂರ್ಣವಾಗಿ ಹೇಗೆ ಕ್ಲೈಮ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಇಲ್ಲಿದೆ ಕೆಲ ಇಂಟ್ರೆಸ್ಟಿಂಗ್ ಮಾಹಿತಿ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ವಿನಾಯಿತಿಗೆ ಅಗತ್ಯವಿರುವ ಹೂಡಿಕೆಗಳನ್ನು ಮಾಡಲು ಮಾರ್ಚ್ 31, 2023 ಕೊನೆಯ ದಿನಾಂಕವಾಗಿದೆ. ನೀವು ತೆರಿಗೆ ವಿನಾಯಿತಿಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕಚೇರಿಗೆ ಸಲ್ಲಿಸಿರಬಹುದು. ಒಮ್ಮೆ ಅವೆಲ್ಲವೂ ಸರಿಯಾಗಿವೆಯೇ ಮತ್ತು ಸಂಪೂರ್ಣ ತೆರಿಗೆ ವಿನಾಯಿತಿಗಳು ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಒಳಿತು.
ನಿಮ್ಮ ಮಕ್ಕಳ ಬೋಧನಾ ಶುಲ್ಕದ ಮೇಲೆಯೂ ವಿನಾಯಿತಿ:ಹೂಡಿಕೆಯ ಹೊರತಾಗಿ ತೆರಿಗೆ ವಿನಾಯಿತಿಗಾಗಿ ಕೆಲವು ವೆಚ್ಚಗಳನ್ನು ಸಹ ಪಡೆಯಬಹುದು. ಅದರಲ್ಲಿ ಮಕ್ಕಳ ಬೋಧನಾ ಶುಲ್ಕವೂ ಒಂದು. ಮಾನ್ಯತೆ ಪಡೆದ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನಕ್ಕಾಗಿ ಪಾವತಿಸಿದ ಶುಲ್ಕವನ್ನು ಈ ಉದ್ದೇಶಕ್ಕಾಗಿ ತೋರಿಸಬಹುದು. ಇದು ಗರಿಷ್ಠ ಎರಡು ಮಕ್ಕಳಿಗೆ ಅನ್ವಯಿಸುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಪ್ರಕಾರ ಈ ವಿನಾಯಿತಿಯನ್ನು 1,50,000 ರೂ. ವರೆಗೆ ಪಡೆಯಬಹುದು.
ಈ ವಿನಾಯಿತಿ ಸೌಲಭ್ಯವು ಪ್ರತಿಯೊಬ್ಬ ತೆರಿಗೆದಾರರಿಗೂ ಲಭ್ಯವಿದೆ. ಆದರೆ, ವಿದೇಶದಲ್ಲಿ ಓದುತ್ತಿರುವ ಮಕ್ಕಳಿಗೆ ಪಾವತಿಸುವ ಶುಲ್ಕಕ್ಕೆ ಇದು ಅನ್ವಯಿಸುವುದಿಲ್ಲ. ಮಕ್ಕಳ ಕಲ್ಯಾಣಕ್ಕಾಗಿ ಉದ್ಯೋಗದಾತರು ನೀಡುವ ಯಾವುದೇ ವಿಶೇಷ ಭತ್ಯೆಗೂ ವಿನಾಯಿತಿ ನೀಡಲಾಗಿದೆ. ಆದರೆ, ಇದು ನಿರ್ದಿಷ್ಟ ಮಿತಿಗಳಿಗೆ ಒಳಪಟ್ಟಿರುತ್ತದೆ. ಆದಾಯ ತೆರಿಗೆ ಕಾಯಿದೆ ಸೆಕ್ಷನ್ 10 ರ ಪ್ರಕಾರ ವರ್ಷಕ್ಕೆ 1,200 ರೂ.ಗಿಂತ ಹೆಚ್ಚಿನ ವಿನಾಯಿತಿಯನ್ನು ಶಿಕ್ಷಣ ಭತ್ಯೆ ಅಡಿ ಮತ್ತು ರೂ 3,600 ಹಾಸ್ಟೆಲ್ ಭತ್ಯೆಯ ಅಡಿಯೂ ಪಡೆಯಬಹುದು.