ಹೈದರಾಬಾದ್:ಹಣಕಾಸು ನಿರ್ವಹಣೆಯ ವಿಚಾರದಲ್ಲಿ ವ್ಯಕ್ತಿಯೊಬ್ಬ ಎಷ್ಟು ಶಿಸ್ತುಬದ್ಧನಾಗಿದ್ದಾನೆ ಎಂಬುದನ್ನು ಆತನ ಕ್ರೆಡಿಟ್ ಸ್ಕೋರ್ ಸೂಚಿಸುತ್ತದೆ. ಅಗತ್ಯವಿದ್ದಾಗ ತಕ್ಷಣಕ್ಕೆ ಸಾಲ ಪಡೆಯಲು ಈ ಸ್ಕೋರ್ ನಿಮಗೆ ಸಹಾಯ ಮಾಡುತ್ತದೆ. ಆದರೆ, ಕೆಲವೊಮ್ಮೆ ನಿಮ್ಮ ಕ್ರೆಡಿಟ್ ಸ್ಕೋರ್ ಇಳಿಕೆಯಾಗುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಹೀಗೆ ಏಕಾಗುತ್ತದೆ? ಹೀಗಾದಾಗ ನಾವು ಏನು ಮಾಡಬಹುದು? ಕ್ರೆಡಿಟ್ ಸ್ಕೋರ್ ಇಳಿದಾಗ ಏನು ಮಾಡಬೇಕೆಂಬುದನ್ನು ತಿಳಿಯಲು ಮುಂದೆ ಓದಿ.
ನಿಮ್ಮ ಖಾತೆಗೆ ನಿಮಗೆ ತಿಳಿಯದಂತೆಯೇ ಯಾವುದಾದರೂ ಹೊಸ ಸಾಲ ಸೇರಿಸಲ್ಪಟ್ಟಿದೆಯೇ ಚೆಕ್ ಮಾಡಿ. ಲೋನ್ ಇಎಂಐಗಳು ತಡವಾಗುವುದನ್ನು ತಪ್ಪಿಸಿ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪೂರ್ಣವಾಗಿ ಪಾವತಿ ಮಾಡಿ. ಯಾವುದೋ ಒಂದೆರಡು ಕಾರಣಗಳಿಂದ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತಿರಬಹುದು. ಕ್ರೆಡಿಟ್ ರಿಪೋರ್ಟ್ ಅನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿದರೆ ಎಲ್ಲವೂ ತಿಳಿಯುತ್ತದೆ. ಎಲ್ಲಿ ತಪ್ಪಾಗುತ್ತಿದೆ ಎಂಬುದನ್ನು ತಿಳಿದು ಅವನ್ನು ಸರಿಮಾಡಿದರೆ ಕ್ರೆಡಿಟ್ ಸ್ಕೋರ್ ಇಳಿಕೆಯಾಗುವುದನ್ನು ನಿಲ್ಲಿಸಬಹುದು.
ಕಂತುಗಳ ವಿಳಂಬ ಪಾವತಿ:ಸಾಮಾನ್ಯವಾಗಿ ಇಎಂಐಗಳ ವಿಳಂಬ ಪಾವತಿ ಅಥವಾ ದೀರ್ಘಕಾಲದವರೆಗೆ ಅವುಗಳನ್ನು ನಿರ್ಲಕ್ಷಿಸಿದರೆ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಯಾವಾಗಲೋ ಒಮ್ಮೆ ಇಎಂಐ ಸಕಾಲದಲ್ಲಿ ಪಾವತಿಸದಿದ್ದರೆ ಮತ್ತೆ ನಿಯಮಿತವಾಗಿ ಪಾವತಿಸಿ ಸ್ಕೋರ್ ಸರಿಪಡಿಸಬಹುದು. ಆದರೆ, ಯಾವಾಗಲೂ ತಡ ಮಾಡುತ್ತಿದ್ದರೆ ಸ್ಕೋರ್ ಹೆಚ್ಚಿಸುವುದು ಅಸಾಧ್ಯ. ಈ ಬಗ್ಗೆ ಗಮನ ಹರಿಸದಿದ್ದರೆ ಭವಿಷ್ಯದಲ್ಲಿ ಸಮಸ್ಯೆಗಳು ಎದುರಾಗಬಹುದು.
ಕ್ರೆಡಿಟ್ ಕಾರ್ಡ್ ಮಿತಿಯಲ್ಲಿ ಬಳಸಿ:ಕ್ರೆಡಿಟ್ ಕಾರ್ಡ್‌ಗಳನ್ನು ಯಾವಾಗಲೂ ಮಿತಿಯಲ್ಲಿ ಬಳಸಬೇಕು. ನೀವು ಕಾರ್ಡ್ ಮಿತಿಯ ಶೇಕಡಾ 30 ಕ್ಕಿಂತ ಹೆಚ್ಚು ಬಳಸಿದ್ದರೆ ನೀವು ಸಾಲವನ್ನು ಅವಲಂಬಿಸಿರುವಿರಿ ಎಂದು ಬ್ಯಾಂಕ್‌ಗಳು ಅರ್ಥಮಾಡಿಕೊಳ್ಳುತ್ತವೆ. ಆದ್ದರಿಂದ, ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯ ಶೇಕಡಾ 30 ಕ್ಕಿಂತ ಹೆಚ್ಚು ಬಳಸಬೇಡಿ. ಶೇ 90 ರಷ್ಟು ಬಳಸಿದರೆ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
ಅತಿಯಾದ ಕ್ರೆಡಿಟ್ ಕಾರ್ಡ್ ಬಳಕೆಯಿಂದಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗಿದೆ ಎಂದು ನೀವು ಭಾವಿಸಿದರೆ, ತಕ್ಷಣವೇ ಕಾರ್ಡ್ ಬಳಕೆಯ ಅನುಪಾತವನ್ನು ಶೇಕಡಾ 30 ಕ್ಕಿಂತ ಕಡಿಮೆ ಮಾಡಿಕೊಳ್ಳಿ. ಇದರಿಂದ ಕ್ರಮೇಣ ಸ್ಕೋರ್ ಸುಧಾರಿಸುತ್ತದೆ.