ಹೈದರಾಬಾದ್:ನೀವು ಗೃಹ ಸಾಲ ತೆಗೆದುಕೊಂಡಿದ್ದೀರಾ?. ಹೌದು, ಎಂದಾದಲ್ಲಿ ಯಾವುದೇ ಸಂದರ್ಭದಲ್ಲೂ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗದಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ. ಆಗಲೇ ನಿಮಗೆ ಬಡ್ಡಿ ಹೊರೆಯಿಂದ ಮುಕ್ತಿ ಸಿಗುತ್ತದೆ. ಏಕೆಂದರೆ, ಈಗ ಬ್ಯಾಂಕ್‌ಗಳು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಶೇಕಡಾ 0.75 ರಿಂದ ಶೇ 1 ರವರೆಗೆ ಬಡ್ಡಿ ರಿಯಾಯಿತಿ ನೀಡುತ್ತಿವೆ.
ಗೃಹ ಸಾಲದ ಬಡ್ಡಿದರಗಳು ವರ್ಷದಲ್ಲಿ ಹೆಚ್ಚಿವೆ. ಇತ್ತೀಚಿನ ದಿನಗಳಲ್ಲಿ ಇವು ಸ್ಥಿರವಾಗಿವೆ. ಆದ್ರೆ ಕೆಲವು ಬ್ಯಾಂಕ್‌ಗಳು ಮತ್ತು ಗೃಹ ಸಾಲ ಕಂಪನಿಗಳು ಬಡ್ಡಿ ತಗ್ಗಿಸಲು ಸಾಲಗಾರರಿಗೆ ರಿಯಾಯಿತಿ ನೀಡುತ್ತವೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಸ್ವಲ್ಪ ಮೊತ್ತವನ್ನು ಶುಲ್ಕವಾಗಿ ವಸೂಲಿ ಮಾಡಿ, ಬಡ್ಡಿ ಕಡಿಮೆ ಮಾಡಲಾಗುತ್ತದೆ. ನೀವು ನಿಮ್ಮ ಬ್ಯಾಂಕ್‌ಗೆ ಹೋಗಿ ಈ ಸೌಲಭ್ಯ ಲಭ್ಯವಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಿ.
ಸಾಮಾನ್ಯವಾಗಿ, 750 ಅಂಕಗಳಿಗಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ನೀವು ಉತ್ತಮ ಆರ್ಥಿಕ ಶಿಸ್ತು ಹೊಂದಿದ್ದೀರಿ ಎಂದರ್ಥ. ನೀವು ಹಳೆಯ ಸಾಲಗಳನ್ನು ಎಷ್ಟು ಚೆನ್ನಾಗಿ ಪಾವತಿಸುತ್ತಿದ್ದೀರಿ ಎಂಬುದನ್ನು ಕ್ರೆಡಿಟ್ ಸ್ಕೋರ್ ಸರಳವಾಗಿ ಹೇಳುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ 800 ಅಂಕಗಳಾಗಿದ್ದರೆ ಬ್ಯಾಂಕ್‌ಗಳು ಹೊಸ ಸಾಲ ನೀಡಲು ಅಭ್ಯಂತರ ಇಲ್ಲದಿರಬಹುದು. ಆದರೆ, ನಿಮ್ಮ ಆದಾಯವನ್ನು ಗಮನಿಸಿದಾಗ ಮಾತ್ರ ನೀವು ನಿಜವಾಗಿಯೂ ಎಷ್ಟು ಸಾಲಕ್ಕೆ ಅರ್ಹರು ಎಂಬುದು ತಿಳಿಯುತ್ತದೆ. ಇದು ನಿಮಗೆ ಬಡ್ಡಿದರದ ಮೇಲೆ ಚೌಕಾಶಿ ಮಾಡುವ ಅವಕಾಶ ನೀಡುತ್ತದೆ.
ಕ್ರೆಡಿಟ್ ಕಾರ್ಡ್ ಬಿಲ್‌ಗಳು, ಸಾಲದ ಕಂತುಗಳು, ವಿಮಾ ಪಾಲಿಸಿ ಪ್ರೀಮಿಯಂ, ಪೋಸ್ಟ್‌ಪೇಯ್ಡ್ ಫೋನ್ ಬಿಲ್‌ಗಳು ಇತ್ಯಾದಿಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಏಕೆಂದರೆ, ಇವು ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ವಿಷಯಗಳು. ನೀವು ವಿಳಂಬಿಸಿದರೆ ಕಡಿಮೆ ಬಡ್ಡಿದರದ ಸಾಲಗಳ ಲಭ್ಯತೆ ಸುಲಭವಲ್ಲ ಎಂಬುದನ್ನು ನೆನಪಿಡಿ. ಕಂತುಗಳು ನಿಮ್ಮ ಆದಾಯದ ಶೇ 40 ರಷ್ಟು ಮೀರದಂತೆ ನೋಡಿಕೊಳ್ಳುವುದು ಯಾವಾಗಲೂ ಉತ್ತಮ. ಕನಿಷ್ಠ ಮೂರು ತಿಂಗಳ ಕಂತುಗಳಿಗೆ ಸಾಕಷ್ಟು ಮೊತ್ತವು ಬ್ಯಾಂಕಿನಲ್ಲಿ ಲಭ್ಯವಿರಬೇಕು. ಆಗ ಮಾತ್ರ ಯಾವುದೇ ತೊಂದರೆಯಿಲ್ಲದೆ ಕಂತುಗಳನ್ನು ಪಾವತಿಸಬಹುದು.