ನವದೆಹಲಿ: ಫೇಮ್ ಇಂಡಿಯಾ ಯೋಜನೆ ಅಡಿಯಲ್ಲಿ ಎರಡು ಹಂತಗಳಲ್ಲಿ ಮಂಜೂರಾದ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ಗಳಲ್ಲಿ ಮೊದಲ ಹಂತದ ಚಾರ್ಜಿಂಗ್ ಸ್ಟೇಷನ್‌ಗಳು ಎರಡನೇ ಹಂತದ ಚಾರ್ಜಿಂಗ್ ಸ್ಟೇಷನ್ಗಿಂತ ಅಗ್ಗವಾಗಿದೆ ಎಂದು ಸಂಸದೀಯ ಸಮಿತಿ ಹೇಳಿದೆ. ಈ ಬಗ್ಗೆ ಇವಿ ನೀತಿಯ ಮೌಲ್ಯ ಮಾಪನದಲ್ಲಿ ಅನುದಾನದ ಅಸಮರ್ಪಕ ಬಳಕೆಯನ್ನು ತಪ್ಪಿಸಲು ಸರ್ಕಾರ ಲೆಕ್ಕಪರಿಶೋಧನೆ(ಆಡಿಟ್) ನಡೆಸಬೇಕೆಂದು ಸಂಸದೀಯ ಸಮಿತಿ ಆಗ್ರಹಿಸಿದೆ.
ಫೇಮ್ ಇಂಡಿಯಾ ಯೋಜನೆಯಡಿ ಮಂಜೂರಾದ ಮೊದಲ ಹಂತದ ಚಾರ್ಜಿಂಗ್ ಸ್ಟೇಷನ್‌ಗಳ ಸರಾಸರಿ ಬೆಲೆ ಸುಮಾರು 8.27 ಲಕ್ಷ ರೂಪಾಯಿ ಇತ್ತು. ಎರಡನೇ ಹಂತದ ಯೋಜನೆಯಲ್ಲಿ ಬಿಡುಗಡೆಯಾದ ಚಾರ್ಜಿಂಗ್ ಸ್ಟೇಷನ್‌ಗಳ ಬೆಲೆ ಸರಾಸರಿ 22.45 ಲಕ್ಷಕ್ಕೆ ಏರಿಕೆ ಆಗಿದೆ ಎಂದು ಸಮಿತಿ ಹೇಳಿದೆ. 2015ರಲ್ಲಿ ಮೊದಲ ಹಂತದ ಫೇಮ್ ಇಂಡಿಯಾ ಯೋಜನೆ ಅಡಿಯಲ್ಲಿ ಕೈಗಾರಿಕಾ ಸಚಿವಾಲಯವು (ಎಂಹೆಚ್ಐ) 43 ಕೋಟಿ ರೂ.ನಲ್ಲಿ 520 ಚಾರ್ಜಿಂಗ್ ಸ್ಟೇಷನ್ಗಳನ್ನು ಮಂಜೂರು ಮಾಡಿತ್ತು. 2019ರಲ್ಲಿ ಎರಡನೇ ಹಂತದ ಫೇಮ್ ಇಂಡಿಯಾ ಯೋಜನೆಯಡಿಯಲ್ಲಿ ಸುಮಾರು 1,000 ಕೋಟಿ ರೂಗಳನ್ನು ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯ ಒದಗಿಸಲು ಮಂಜೂರು ಮಾಡಿತ್ತು.
ವರದಿಯ ಪ್ರಕಾರ, ಫೇಮ್ ಇಂಡಿಯಾದ ಎರಡನೇ ಹಂತದ ಯೋಜನೆ ಅಡಿಯಲ್ಲಿ ಕೈಗಾರಿಕಾ ಸಚಿವಾಲಯವು ಒಟ್ಟು 68 ನಗರಗಳಲ್ಲಿ 2877 ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ಗಳನ್ನು ಮತ್ತು 9 ಎಕ್ಸ್ಪ್ರೆಸ್ ಹೈವೇ ಮತ್ತು 16 ಹೈವೇಗಳಲ್ಲಿ ಒಟ್ಟು 1576 ಚಾರ್ಜಿಂಗ್ ಸ್ಟೇಷನ್ಗಳನ್ನು ಮಂಜೂರು ಮಾಡಿದೆ. ಅಲ್ಲದೇ ಯೋಜನೆಯ ಎರಡು ಹಂತಗಳ ಹೋಲಿಕೆಯಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳ ವೆಚ್ಚದಲ್ಲಿ ಗಣನೀಯ ಏರಿಕೆಯನ್ನು ಇದು ನಿರ್ದಿಷ್ಟವಾಗಿ ಗುರುತು ಮಾಡಿ ತಿಳಿಸಿದೆ.
ಫೇಮ್ ಇಂಡಿಯಾ ಯೋಜನೆಯ ಒಂದನೇ ಹಂತದಲ್ಲಿ ಮಂಜೂರಾದ ಚಾರ್ಜಿಂಗ್ ಸ್ಟೇಷನ್‌ಗಳ ಸರಾಸರಿ ವೆಚ್ಚ 8.27 ಲಕ್ಷ ಇದ್ದು, ಆದರೆ ಯೋಜನೆಯ ಎರಡನೇ ಹಂತದಲ್ಲಿ ಮಂಜೂರಾದ ಚಾರ್ಜಿಂಗ್ ಸ್ಟೇಷನ್‌ಗಳು ಸರಾಸರಿ 22.45 ಲಕ್ಷ ರೂ.ನಿಂದ ಗಣನೀಯ ಹೆಚ್ಚಳವಾಗಿದೆ ಎಂದು ತಿಳಿಸಿದೆ. ಹಣದ ಗಣನೀಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಲೆಕ್ಕಪರಿಶೋಧನೆ ನಡೆಸುವಂತೆ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.