ಹೈದರಾಬಾದ್(ತೆಲಂಗಾಣ):ಉದ್ಯೋಗ ಮತ್ತು ವ್ಯಾಪಾರಕ್ಕಾಗಿ ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದ್ರೂ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಅಥವಾ ಅಪಘಾತಗಳಿಂದ ರೈಲುಗಳು ವಿಳಂಬವಾಗುತ್ತವೆ. ಇಲ್ಲವಾದಲ್ಲಿ ಪ್ರಯಾಣಿಕರು ಮತ್ತೊಂದು ರೈಲು ಪಡೆಯಲು ರೈಲು ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಹೀಗಿರುವಾಗ ಹೊರಗಡೆ ಯಾವುದಾದರೂ ಹೋಟೆಲ್ ರೂಮಿನಲ್ಲಿ ಉಳಿದುಕೊಳ್ಳಬೇಕೆಂದರೆ ಅದಕ್ಕೆ ತಗಲುವ ವೆಚ್ಚವೂ ಜಾಸ್ತಿಯಾಗುತ್ತದೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಅಂತಹ ಜನರಿಗೆ ರಿಟೈರಿಂಗ್ ರೂಮ್ಗಳು ಮತ್ತು ವಸತಿ ನಿಲಯದ ಸೌಲಭ್ಯವನ್ನು ಒದಗಿಸುತ್ತಿದೆ. ಅನೇಕರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ.
IRCTC ಪ್ರಯಾಣಿಕರಿಗೆ ಕಡಿಮೆ ದರದ ವಸತಿ ಸೌಕರ್ಯವನ್ನು ಒದಗಿಸುವ ಉದ್ದೇಶದಿಂದ ಈ ರಿಟೈರಿಂಗ್ ರೂಮ್ ಬುಕಿಂಗ್ ಸೌಲಭ್ಯವನ್ನು ತಂದಿದೆ. ಈ ರೂಂಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಬುಕ್ ಮಾಡಬಹುದು. ಎಸಿ, ನಾನ್ ಎಸಿ, ಸಿಂಗಲ್, ಡಬಲ್, ಡಾರ್ಮಿಟರಿ ಮಾದರಿಯ ರೂಮ್ಗಳು ಲಭ್ಯ ಇವೆ. ನೀವು ಕನಿಷ್ಠ ಒಂದು ಗಂಟೆಯಿಂದ ಗರಿಷ್ಠ 48 ಗಂಟೆವರೆಗೆ ಬುಕ್ ಮಾಡಬಹುದು. ಪ್ರದೇಶವನ್ನು ಅವಲಂಬಿಸಿ, ರೂಮ್ ಬುಕಿಂಗ್ ಶುಲ್ಕಗಳು ರೂ.100 ರಿಂದ ರೂ.700 ವರೆಗೆ ಇರುತ್ತದೆ. ಟಿಕೆಟ್ ರಿಜರ್ವೇಷನ್ ಓಕೆ ಆದವರಿಗೆ ಮಾತ್ರ ಈ ರೂಮ್ಗಳನ್ನು ಬುಕ್ ಮಾಡಬಹುದಾಗಿದೆ. ವೆಯ್ಟಿಂಗ್ ಲಿಸ್ಟ್ನಲ್ಲಿರುವ ಪ್ರಯಾಣಿಕರಿಗೆ ಈ ಸೌಲಭ್ಯ ಲಭ್ಯವಿಲ್ಲ. ದೇಶದ ಎಲ್ಲಾ ಪ್ರಮುಖ ರೈಲು ನಿಲ್ದಾಣಗಳಲ್ಲಿ ರಿಟೈರಿಂಗ್ ರೂಮ್ ಸೌಲಭ್ಯ ಲಭ್ಯವಿದೆ. ಈ ರಿಟೈರಿಂಗ್ ರೂಂಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದಾಗಿದೆ.