ನವದೆಹಲಿ: ಭಾರತದಲ್ಲಿ ವಾಯುಯಾನವನ್ನು ಹೆಚ್ಚು ಪ್ರಚುರಗೊಳಿಸಲು, ಹಾಗೂ ಅಗ್ಗದ ದರದಲ್ಲಿ ಪ್ರಯಾಣಿಕರಿಗೆ ವಿಮಾನಯಾನ ಒದಗಿಸುತ್ತಿರುವ ಇಂಡಿಗೋ ಸಂಸ್ಥೆ, 500 ಏರ್‌ಬಸ್ ವಿಮಾನಗಳ ಖರೀದಿಗೆ ಆರ್ಡರ್ ಕೊಟ್ಟಿದೆ. ಈ ಬಗ್ಗೆ ಮಾತನಾಡಿರುವ ಕಂಪನಿ ಸಿಇಒ ಪೀಟರ್ ಎಲ್ಬರ್ಸ್ ಇದೊಂದು ಐತಿಹಾಸಿಕ ಕ್ಷಣ ಎಂದು ಹೇಳಿದ್ದಾರೆ.
ಏರ್‌ಬಸ್‌ನೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರು ಪ್ಯಾರಿಸ್‌ನಲ್ಲಿ ಮಾತನಾಡಿದರು. "ನಾವು ಈ ಘೋಷಣೆಯಿಂದ ನಿಜವಾಗಿಯೂ ಸಂತಸಗೊಂಡಿದ್ದೇವೆ. ಇದು ಇಂಡಿಗೋದ ಅತಿದೊಡ್ಡ ಡೀಲ್ ಆಗಿದೆ. ಅಷ್ಟೇ ಅಲ್ಲ, ಏರ್‌ಬಸ್‌ನೊಂದಿಗೆ ಒಂದೇ ರೀತಿಯ ವಿಮಾನಗಳಿಗಾಗಿ ಇದುವರೆಗೆ ಮಾಡಿಕೊಳ್ಳಲಾದ ಅತಿ ದೊಡ್ಡ ಖರೀದಿ ಒಪ್ಪಂದ ಇದಾಗಿದೆ. ಅಷ್ಟೇ ಅಲ್ಲ ಭಾರತೀಯ ವಾಯುಯಾನದಲ್ಲಿ ಐತಿಹಾಸಿಕ ಕ್ಷಣವಾಗಿದೆ‘‘ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಜೂನ್ 19 ರಂದು ಪ್ಯಾರಿಸ್ ಏರ್ ಶೋ 2023ರಲ್ಲಿ ಈ ಡೀಲ್ ಅಂತಿಮಗೊಳಿಸಲಾಗಿದೆ. ಇಂಡಿಗೋ ಮಂಡಳಿಯ ಅಧ್ಯಕ್ಷ ವಿ ಸುಮಂತ್ರನ್, ಇಂಡಿಗೋದ ಸಿಇಒ ಪೀಟರ್ ಎಲ್ಬರ್ಸ್, ಏರ್‌ಬಸ್ ಸಿಇಒ ಗಿಲ್ಲೌಮ್ ಫೌರಿ ಮತ್ತು ಏರ್‌ಬಸ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಮತ್ತು ಅಂತಾರಾಷ್ಟ್ರೀಯ ಮುಖ್ಯಸ್ಥ ಕ್ರಿಶ್ಚಿಯನ್ ಸ್ಕೆರೆರ್ ಉಪಸ್ಥಿತಿಯಲ್ಲಿ ಖರೀದಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
"ಈ ಒಪ್ಪಂದ ಭಾರತದ ಬೆಳವಣಿಗೆಯ ಬಗ್ಗೆ ಮಾತನಾಡುವಂತೆ ಮಾಡಿದೆ. ಇದು ಭಾರತದ ಭವಿಷ್ಯದ ಬಗ್ಗೆ ಮಾತನಾಡುತ್ತದೆ ಮತ್ತು ಇದು ಇಂಡಿಗೋ ಭವಿಷ್ಯದ ಬಗ್ಗೆಯೂ ಹೇಳುತ್ತದೆ. ಆದ್ದರಿಂದ 500 ವಿಮಾನಗಳ ಖರೀದಿಯ ಈ ಆದೇಶವು ಒಟ್ಟು ವಿಮಾನಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವಂತೆ ಮಾಡಿದೆ. ಈಗ ನಮ್ಮ ಬಳಿ 482 ವಿಮಾನಗಳಿವೆ‘‘ ಎಂದು 500 ವಿಮಾನಗಳ ಖರೀದಿ ಬಳಿಕ ಇಂಡಿಗೋ ಸಿಇಒ ಹೇಳಿದ್ದಾರೆ.