ನವದೆಹಲಿ :ನಾಲ್ವರು ಹಿಂದೂಜಾ ಸಹೋದರರಲ್ಲಿ ಹಿರಿಯ ಹಾಗೂ ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಶ್ರೀಚಂದ್ ಪರಮಾನಂದ ಹಿಂದೂಜಾ(87) ಅವರು ಬುಧವಾರ ಲಂಡನ್‌ನಲ್ಲಿ ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಭಾರತೀಯ ಮೂಲದ ಎಸ್.ಪಿ ಹಿಂದುಜಾ ಅವರು ಲಂಡನ್ ಪ್ರಜೆಯಾಗಿದ್ದರು.
ಗೋಪಿಚಂದ್, ಪ್ರಕಾಶ್, ಅಶೋಕ್ ಮತ್ತು ಇಡೀ ಹಿಂದೂಜಾ ಕುಟುಂಬ ಹಿಂದೂಜಾ ಗ್ರೂಪ್‌ನ ಅಧ್ಯಕ್ಷರಾದ ಎಸ್.ಪಿ ಹಿಂದುಜಾ ಅವರ ನಿಧನವನ್ನು ವಿಷಾದಿಸುತ್ತದೆ ಎಂದು ಕುಟುಂಬದ ವಕ್ತಾರರು ತಿಳಿಸಿದ್ದಾರೆ. ನಮ್ಮ ದಿವಂಗತ ತಂದೆ ಪಿ.ಡಿ ಹಿಂದುಜಾ ಅವರ ಸಂಸ್ಥಾಪಕ ತತ್ವಗಳು ಮತ್ತು ಮೌಲ್ಯಗಳನ್ನು ದಯಪಾಲಿಸುವ ಕುಟುಂಬಕ್ಕೆ ಎಸ್.ಪಿ ಹಿಂದುಜಾ ದೂರದೃಷ್ಟಿ ಮತ್ತು ಮಾರ್ಗದರ್ಶಕರಾಗಿದ್ದರು. ಅವರು ತಮ್ಮ ಆತಿಥೇಯ ದೇಶವಾದ ಯುಕೆ ಮತ್ತು ತಾಯ್ನಾಡು ಭಾರತದ ನಡುವೆ ಗಟ್ಟಿಯಾದ ಸಂಬಂಧವನ್ನು ಬೆಸೆಯುವುದರಲ್ಲಿ ತಮ್ಮ ಸಹೋದರರೊಂದಿಗೆ ಬಹಳ ಮುಖ್ಯ ಪಾತ್ರವನ್ನು ವಹಿಸಿದ್ದರು ಎಂದು ಕುಟುಂಸ್ಥರು ಹೇಳಿದ್ದಾರೆ.
ಇದನ್ನೂ ಓದಿ :ಅಸ್ಸೋಂ ಟೀ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್: 1 ವರ್ಷದಲ್ಲಿ 165 ಮಿಲಿಯನ್ ಕೆಜಿ ಚಹಾ ಪುಡಿ ಮಾರಾಟ
1952 ರಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಎಸ್.ಪಿ ಹಿಂದುಜಾ ಅವರ ತಂದೆ ಪಿ.ಡಿ ಹಿಂದುಜಾ ಅವರೊಂದಿಗೆ ಕುಟುಂಬ ವ್ಯವಹಾರದಲ್ಲಿ ಪಾಲುದಾರರಾದರು. ಜೊತೆಗೆ ಅವರ ಸಹೋದರರಾದ ಗೋಪಿಚಂದ್, ಪ್ರಕಾಶ್, ಅಶೋಕ್ ಕೂಡ ಸಹೋದರನ ಉದ್ಯಮದಲ್ಲಿ ಕೈ ಜೋಡಿಸಿದರು. 80ರ ದಶಕದಲ್ಲಿ ಸ್ವೀಡಿಷ್ ಬಂದೂಕು ತಯಾರಕ ಎಬಿ ಬೋಫೋರ್ಸ್‌ಗೆ ಭಾರತೀಯ ಸರ್ಕಾರದ ಗುತ್ತಿಗೆಯನ್ನು ಪಡೆಯುವುದಕ್ಕೆ ಸಹಾಯ ಮಾಡಲು ಸುಮಾರು ಎಸ್‌ಇಕೆ 81 ಮಿಲಿಯನ್ ಕಮಿಷನ್‌ನನ್ನು ಎಸ್.ಪಿ ಹಿಂದುಜಾ ಪಡೆದಿದ್ದಾರೆ ಎಂದು ಈ ಹಿಂದೆ ಆರೋಪಿಸಲಾಗಿತ್ತು. ಆದರೆ ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿತ್ತು.
ಇದನ್ನೂ ಓದಿ :ಅದಾನಿ ಗ್ರೂಪ್ ವಿವಾದ ಕುರಿತು ಸಮಿತಿಯ ವರದಿ ಸ್ವೀಕಾರ: ಸೆಬಿ ತನಿಖೆಗೆ ಹೆಚ್ಚುವರಿ 3 ತಿಂಗಳ ಕಾಲಾವಕಾಶದ ಸುಳಿವು ನೀಡಿದ ಸುಪ್ರೀಂ
ಬಳಿಕ 1971 ರಲ್ಲಿ ಪಿ.ಡಿ ಹಿಂದುಜಾ ಅವರ ಮರಣದ ನಂತರ, ಅವರ ಪುತ್ರರು ಕುಟುಂಬದ ಪರಂಪರೆಯನ್ನು ವಹಿಸಿಕೊಂಡು ಮುನ್ನಡಿಸಿದರು. ಹಿಂದುಜಾ ಗ್ರೂಪ್ ಬ್ರಿಟನ್‌ನ ಶ್ರೀಮಂತ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿದೆ. ಅಶೋಕ್ ಲೇಲ್ಯಾಂಡ್, ಗಲ್ಫ್ ಆಯಿಲ್, ಹಿಂದುಜಾ ಬ್ಯಾಂಕ್ ಸ್ವಿಟ್ಜರ್ಲೆಂಡ್, ಇಂಡಸ್‌ಇಂಡ್ ಬ್ಯಾಂಕ್, ಹಿಂದುಜಾ ಗ್ಲೋಬಲ್ ಸೊಲ್ಯೂಷನ್ಸ್, ಹಿಂದುಜಾ ಟಿಎಂಟಿ, ಹಿಂದುಜಾ ವೆಂಚರ್ಸ್, ಇಂಡಸ್‌ಇಂಡ್ ಮೀಡಿಯಾ & ಕಮ್ಯುನಿಕೇಷನ್ಸ್ ಲಿಮಿಟೆಡ್ ಈ ಗ್ರೂಪ್‌ನ ಪ್ರಮುಖ ಕಂಪನಿಗಳಾಗಿವೆ. ಈ ಎಲ್ಲಾ ಸಂಸ್ಥೆಗಳು ಪ್ರಪಂಚದಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ಮನೆ ಮಾತಾಗಿವೆ.
ಇದನ್ನೂ ಓದಿ :ರಷ್ಯಾದಿಂದ ತೈಲ ಖರೀದಿಗೆ ಕೊಂಕು: ಯುರೋಪಿಯನ್ ಕೌನ್ಸಿಲ್ ನಿರ್ಬಂಧಗಳನ್ನು ಮೊದಲು ಓದಿ- ಜೈಶಂಕರ್ ಚಾಟಿ