ಚೆನ್ನೈ : ಭಾರತದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿತ ಹಣದುಬ್ಬರವು ಮಾರ್ಚ್‌ನಲ್ಲಿ 29 ತಿಂಗಳ ಕನಿಷ್ಠ ಮಟ್ಟವಾದ ಶೇಕಡಾ 1.34ಕ್ಕೆ ಇಳಿದಿದೆ. ಪ್ರಾಥಮಿಕ ವಸ್ತುಗಳು, ತಯಾರಿಸಿದ ಉತ್ಪನ್ನಗಳು, ಇಂಧನ ಮತ್ತು ಶಕ್ತಿಯ ಸೂಚ್ಯಂಕಗಳಲ್ಲಿ ಇಳಿಕೆಯಾಗಿದ್ದರಿಂದ ಹಣದುಬ್ಬರ ಕನಿಷ್ಠ ಮಟ್ಟಕ್ಕೆ ತಲುಪಿದೆ. ಫೆಬ್ರವರಿ 2023 ರಲ್ಲಿ ಸಗಟು ಹಣದುಬ್ಬರ ಶೇಕಡಾ 3.85 ರಷ್ಟಿದ್ದರೆ, ಜನವರಿ 2023 ರಲ್ಲಿ ಇದು ಶೇಕಡಾ 4.73 ರಷ್ಟಿತ್ತು. ಫೆಬ್ರುವರಿ ಡಬ್ಲ್ಯುಪಿಐ ಹಣದುಬ್ಬರವು ಶೇಕಡಾ 3.85 ರಲ್ಲಿ ಎರಡು ವರ್ಷಗಳ ಕನಿಷ್ಠ ಮಟ್ಟವಾಗಿದೆ. ಜನವರಿ 2021 ರಲ್ಲಿ ಸಗಟು ಹಣದುಬ್ಬರವು ಶೇಕಡಾ 2.51 ಕ್ಕೆ ಇಳಿದಿತ್ತು. 2023 ರ ಮಾರ್ಚ್‌ಗೆ ಚಿಲ್ಲರೆ ಹಣದುಬ್ಬರವು ಶೇಕಡಾ 5.66 ರಷ್ಟಿತ್ತು. ಇದು ಕೂಡ 15 ತಿಂಗಳ ಕನಿಷ್ಠ ಮಟ್ಟದಲ್ಲಿತ್ತು.
ಮಾರ್ಚ್‌ನಲ್ಲಿ WPI ಹಣದುಬ್ಬರವು 29 ತಿಂಗಳ ಕನಿಷ್ಠ ಶೇಕಡಾ 1.3ಕ್ಕೆ ಕುಸಿತವಾಗಿರುವುದು ಹಿಂದಿನ ವರ್ಷದ ಹೆಚ್ಚಿನ ಮೂಲದಿಂದ ಬೆಂಬಲಿತವಾಗಿದೆ. ತಯಾರಿಸಿದ ಉತ್ಪನ್ನಗಳು ವಿಷಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಹಣದುಬ್ಬರವಿಳಿತ ಉಂಟಾಗಿದೆ ಎಂಬುದು ಗಮನಾರ್ಹ. ಜವಳಿ ಮತ್ತು ಲೋಹಗಳ ಕಡಿಮೆ ಬೆಲೆಗಳ ಕಾರಣದಿಂದ ತಯಾರಿಸಿದ ಉತ್ಪನ್ನಗಳ ಹಣದುಬ್ಬರ ಇಳಿಕೆಯಾಗಿದೆ ಎಂದು ಕೇರ್ ರೇಟಿಂಗ್ಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ ರಜನಿ ಸಿನ್ಹಾ ಮಾಧ್ಯಮಕ್ಕೆ ತಿಳಿಸಿದರು. ಆದಾಗ್ಯೂ ಆಹಾರದ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ. ಇಂಧನ, ವಿದ್ಯುತ್ ಮತ್ತು ತಯಾರಿಸಿದ ಉತ್ಪನ್ನಗಳ ಬೆಲೆ ಇಳಿಕೆಯು ಇದನ್ನು ಸ್ವಲ್ಪಮಟ್ಟಿಗೆ ಸರಿದೂಗಿಸುತ್ತದೆ ಎಂದು ಅವರು ಹೇಳಿದರು. ಸಿನ್ಹಾ ಅವರ ಪ್ರಕಾರ ಮುಂದಿನ ಮೂರು ತಿಂಗಳವರೆಗೆ WPI ಹಣದುಬ್ಬರವು ಶೇಕಡಾ 1 ಶೇಕಡಾಕ್ಕಿಂತ ಕಡಿಮೆ ಸ್ತರದಲ್ಲಿ ಮುಂದುವರಿಯಲಿದೆ.