ಹೈದರಾಬಾದ್:ತಮ್ಮ ಉದ್ದೇಶ ಏನು ಎಂಬುದನ್ನೂ ಮರೆತು ವೈಯಕ್ತಿಕ ಸಾಲಗಳನ್ನು ನೀಡುವ ಅನೇಕ ಸಂಸ್ಥೆಗಳಿವೆ. ಅಗತ್ಯ ಇದೆ ಎಂಬ ಕಾರಣಕ್ಕೆ ಹಿಂದೆ - ಮುಂದೆ ನೋಡದೆಯೂ ವೈಯಕ್ತಿಕ ಸಾಲವನ್ನು ಪಡೆದು ಅದನ್ನು ತೀರಿಸಲು ಹೆಣಗಾಡುತ್ತಿರುವ ಜನರನ್ನು ನಾವು ನೋಡಿದ್ದೇವೆ.
ಹೀಗೆ ಅನಗತ್ಯ ಸಾಲವನ್ನು ಪಡೆದು ತೊಂದರೆಗೆ ಸಿಲುಕಿಕೊಳ್ಳದಂತೆ ಇರಲು ಕೆಲ ಸಲಹೆಗಳನ್ನು ಪಾಲಿಸುವುದು ಉತ್ತಮ. ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸೇವೆ (ECS) ಮೂಲಕ ನೀವು ಪಡೆದ ಸಾಲವನ್ನು ಇಎಂಐ ಮೂಲಕ ಸ್ವಯಂಚಾಲಿತವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಕಡಿತವಾಗುವಂತೆ ಮಾಡಿಕೊಳ್ಳಬಹುದು.
ದಂಡ ತಪ್ಪಿಸಲು ಸಾಕಷ್ಟು ಹಣ ಕಾಯ್ದಿರಿಸಿ:ಇಸಿಎಸ್ ಸ್ವಯಂಚಾಲಿತಗೊಂಡ ಮೇಲೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅಗತ್ಯವಾದ ಹಣವನ್ನು ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಈ ಮೊದಲು ಭಾನುವಾರ ಮತ್ತು ರಜಾ ದಿನಗಳಲ್ಲಿ ಇಸಿಎಸ್ ಸಕ್ರಿಯವಾಗಿರಲಿಲ್ಲ. ಈಗ ಆ ನಿರ್ಬಂಧವನ್ನು ತೆಗೆದು ಹಾಕಲಾಗಿದ್ದು, ಎಲ್ಲ ದಿನಗಳಲ್ಲೂ ಇಸಿಎಸ್ ಸಕ್ರಿಯವಾಗಿರಲಿದೆ. ಹೀಗಾಗಿ ತಪ್ಪದೇ EMI ಗಡುವು ದಿನಾಂಕದ ಮೊದಲು ಮತ್ತು ನಂತರ ನಿಮ್ಮ ಬ್ಯಾಲೆನ್ಸ್ ಪರೀಕ್ಷಿಸಿಕೊಂಡು ನಿಗದಿತ ಹಣವನ್ನು ಕಾಯ್ದಿರಿಸಿ.
ಉದಾಹರಣೆಗೆ ನಿಮ್ಮ ಖಾತೆಯಲ್ಲಿ ನೀವು ಸಾಕಷ್ಟು ಬ್ಯಾಲೆನ್ಸ್ ಹೊಂದಿಲ್ಲದಿದ್ದರೆ ಕೂಡಿಟ್ಟ ತುರ್ತುಹಣವನ್ನು ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ದಂಡ ತೆರಬೇಕಾಗುತ್ತದೆ. ಹೀಗಾಗದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಿ. ಪರ್ಸನಲ್ ಲೋನ್ ಪಡೆದುಕೊಳ್ಳುವಾಗ, ಕನಿಷ್ಠ ಎರಡು ಅಥವಾ ಮೂರು EMI ಗಳನ್ನು ಕವರ್ ಮಾಡಲು ನೀವು ಸಾಕಷ್ಟು ಹಣ ಬ್ಯಾಂಕ್ ಅಕೌಂಟ್ನಲ್ಲಿ ಇಟ್ಟುಕೊಳ್ಳಬೇಕು. ಮತ್ತು ನಿಮ್ಮಲ್ಲಿ ಹಣ ಇದ್ದರೆ ಅದನ್ನು ಲಿಕ್ವಿಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು.
ಬ್ಯಾಂಕ್ನವರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿ:ಒಂದು ವೇಳೆ ನೀವು EMI ಪಾವತಿಯನ್ನು ನಿಗದಿತ ಸಮಯದಲ್ಲಿ ಮಾಡಲು ಸಾಧ್ಯವಾಗದಿದ್ದರೆ, ಈ ಬಗ್ಗೆ ಬ್ಯಾಂಕ್ನವರಿಗೆ ಮೊದಲೇ ಮಾಹಿತಿ ನೀಡಿ, ಇಸಿಎಸ್ ಸೌಲಭ್ಯವನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಮನವಿ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಬ್ಯಾಂಕ್‌ಗಳು ಗ್ರಾಹಕರಿಂದ ಇಂತಹ ವಿನಂತಿಗಳನ್ನು ಸ್ವೀಕರಿಸುತ್ತವೆ. ಆದರೆ, ಇದಕ್ಕೆ ದಂಡವನ್ನು ಪಾವತಿಸಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ.
ನೀವು ಯಾವುದೇ ಸಾಲವನ್ನು ತೆಗೆದುಕೊಂಡರು ಅದಕ್ಕೆ ಅನುಗುಣವಾಗಿ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ. ಯಾವುದೇ ಅಪಾಯ ಬಂದರೂ ಇದು ನಿಮ್ಮ ಮನೆಯವರ ಮೇಲೆ ಹೊರೆಯಾಗುವುದನ್ನು ತಪ್ಪಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲವು ಕಂಪನಿಗಳು ಸಾಲ ಮಾಡಿದ ಗ್ರಾಹಕ ತನ್ನ ಕೆಲಸ ಕಳೆದುಕೊಂಡರೆ EMI ಗಳಿಗೆ ವಿಮಾ ರಕ್ಷಣೆ ಒದಗಿಸುತ್ತದೆ. ಈ ಸಂಬಂದ ಸಾಲ ಪಡೆಯುವಾಗ ವಿಮೆ ಮಾಡಿಸಿಕೊಳ್ಳುವುದು ಉತ್ತಮ.
ಸುರಕ್ಷಿತ ಹಣಕಾಸು ಸಂಸ್ಥೆಗಳಿಂದಲೇ ಸಾಲ ಮಾಡಿ;ನೀವು ನಿಮ್ಮ ತುರ್ತು ಅಗತ್ಯಗಳಿಗೆ ಸಾಲ ಪಡೆಯುವಾಗ ಎಚ್ಚರಿಕೆ ವಹಿಸಿ ಆರ್ಬಿಐನಿಂದ ಮಾನ್ಯತೆ ಪಡೆದ ಹಣಕಾಸು ಸಂಸ್ಥೆಗಳಿಂದಲೇ ಸಾಲ ಪಡೆದುಕೊಳ್ಳಿ, ಇದು ಸುರಕ್ಷಿತ ಮಾರ್ಗವೂ ಹೌದು. ಸರಿಯಾಗಿ ಯಾವುದನ್ನೂ ತಿಳಿದುಕೊಳ್ಳದೇ ಸಾಲ ನೀಡುವ ಸಂಸ್ಥೆಗಳಿಗೆ ಬಲಿಯಾಗಬೇಡಿ. ಇತ್ತೀಚೆಗೆ ಆನ್ಲೈನ್ ಸಾಲ ನೀಡುವ ಆ್ಯಪ್ಗಳು ಹೆಚ್ಚಾಗಿವೆ.
ಆ ಬಗ್ಗೆ ಸೂಕ್ತ ಗಮನ ಹರಿಸುವುದು ಉತ್ತಮ. ಇಂತಹ ಆ್ಯಪ್ಗಳಿಂದ ಕಿರುಕುಳ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇಂತಹ ಅನುಭವವನ್ನೇನಾದರೂ ನೀವು ಪಡೆದುಕೊಂಡಿದ್ದರೆ, ಅಂತಹ ಸಂದರ್ಭಗಳಲ್ಲಿ ನೀವು ಪೊಲೀಸರಿಗೆ ದೂರು ಸಲ್ಲಿಸಬಹುದು. ಆರ್‌ಬಿಐ ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಸ್ಕೀಮ್ ಅಡಿ ದೂರು ದಾಖಲಿಸಿ ನಿಮಗಾದ ಅನ್ಯಾಯಕ್ಕೆ ನ್ಯಾಯ ಪಡೆದುಕೊಳ್ಳಬಹುದು.
ಇದನ್ನು ಓದಿ:ಅಂಬಾನಿ ಉತ್ತರಾಧಿಕಾರ ಹಸ್ತಾಂತರ: ಮಗಳು ಇಶಾಗೆ ರಿಟೇಲ್, ಮಗ ಅನಂತ್ಗೆ ಇಂಧನ ಘಟಕದ ಹೊಣೆ