ನವದೆಹಲಿ:ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್ ಮೇಲೆ ಶೇ 28ರಷ್ಟು ತೆರಿಗೆಯನ್ನು ಹೆಚ್ಚಿಸಿದರೆ, ಮಲ್ಟಿಫ್ಲೆಕ್ಸ್‌ಗಳಲ್ಲಿ ಮಾರಾಟವಾಗುವ ಆಹಾರ ಮತ್ತು ಪಾನೀಯಗಳ ಮೇಲಿನ ತೆರಿಗೆಯನ್ನು ಶೇ.18 ರಿಂದ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಮಲ್ಟಿಫ್ಲೆಕ್ಸ್ಗಳ ಆಹಾರದ ದರವಿನ್ನು ಅಗ್ಗವಾಗುವ ಸಾಧ್ಯತೆ ಇದೆ. ಕ್ಯಾನ್ಸರ್ಗೆ ನೀಡಲಾಗುವ Dinutuximab ಔಷಧ ಆಮದು, ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸಲಾಗುವ ಔಷಧಗಳು ಮತ್ತು ವಿಶೇಷ ವೈದ್ಯಕೀಯ ಉದ್ದೇಶಗಳಲ್ಲಿ ಬಳಸಲಾಗುವ ಉತ್ಪನ್ನ, ಖಾಸಗಿ ಸಂಸ್ಥೆಗಳು ಒದಗಿಸುವ ಉಪಗ್ರಹ ಉಡ್ಡಯನ ಸೇವೆಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಎಲ್ಲ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಿನಿಮಾ ಹಾಲ್‌ಗಳಲ್ಲಿ ಮಾರಾಟ ಮಾಡಲಾಗುವ ಆಹಾರ ಮತ್ತು ಪಾನೀಯಗಳ ಮೇಲೆ ವಿಧಿಸುತ್ತಿದ್ದ ಶೇ.18 ತೆರಿಗೆ ಬದಲಿಗೆ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ವಿಧಿಸುವ ತೆರಿಗೆಗೆ ಸಮಾನವಾಗಿ ಅಂದರೆ ಶೇ.5ಕ್ಕೆ ಜಿಎಸ್‌ಟಿ ತೆರಿಗೆ ಇಳಿಸಲಾಗಿದೆ.
ವಾಹನಗಳ ಮೇಲಿನ ತೆರಿಗೆಯ ಮೇಲೆ ಸೆಸ್ ವಿಧಿಸಲು ಜಿಎಸ್‌ಟಿ ಮಂಡಳಿ ಅನುಮೋದಿಸಿದೆ. ಅಂದರೆ, ಈಗಿರುವ ಶೇ.28 ರಷ್ಟು ತೆರಿಗೆ ಮೇಲೆ ಹೆಚ್ಚುವರಿಯಾಗಿ ಶೇ.22 ರಷ್ಟು ಸೆಸ್ ಅನ್ನು ಕೂಡ ಸೇರಿಸಿ ತೆರಿಗೆ ರೂಪದಲ್ಲಿ ಪಡೆಯಲಾಗುತ್ತದೆ. 1,500 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ, 4 ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಉದ್ದದ, 170 ಎಂಎಂ ಭಾರವಿಲ್ಲದ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಯಾವುದೇ ವಾಹನಗಳಿಗೆ ಈ ಸೆಸ್ ಅನ್ವಯವಾಗಲಿದೆ.