ನವದೆಹಲಿ : ಗೋಧಿ ಮತ್ತು ಅಕ್ಕಿಗಳನ್ನು ಕೇವಲ ಇ-ಹರಾಜು ಮೂಲಕವೇ ವಿತರಣೆ ಮಾಡುವಂತೆ ಕೇಂದ್ರ ಸರ್ಕಾರವು ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾಗೆ ನಿರ್ದೇಶನ ನೀಡಿದೆ ಎಂದು ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಕೆ. ಕೆ ಮೀನಾ ಹೇಳಿದ್ದಾರೆ. ಹಣದುಬ್ಬರದ ಮೇಲೆ ನಿಯಂತ್ರಣ ಸಾಧಿಸಲು ಮತ್ತು ಅಂಥ ಪ್ರಮುಖ ಆಹಾರ ಧಾನ್ಯಗಳ ಬೆಲೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿರ್ದೇಶನ ನೀಡಲಾಗಿದೆ.
ಈ ಇ-ಹರಾಜಿನಲ್ಲಿ ಖರೀದಿದಾರರು ಬಿಡ್ ಮಾಡಬಹುದಾದ ಗರಿಷ್ಠ ಪ್ರಮಾಣವು 100 ಟನ್‌ಗಳಿಗೆ ಸೀಮಿತವಾಗಿರುತ್ತದೆ. ಸಣ್ಣ ಗೋಧಿ ಸಂಸ್ಕರಣೆದಾರರು ಮತ್ತು ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ಕನಿಷ್ಠ ಬಿಡ್ ಪ್ರಮಾಣವನ್ನು 10 ಟನ್‌ಗಳಿಗೆ ನಿಗದಿಪಡಿಸಲಾಗಿದೆ. ಬಿಡ್ದಾರರಿಗೆ ಸ್ಟಾಕ್‌ಗಳನ್ನು ಬಿಡುಗಡೆ ಮಾಡುವ ಮೊದಲು ರಾಜ್ಯದ ಜಿಎಸ್‌ಟಿ ನೋಂದಣಿಯನ್ನು ಮ್ಯಾಪ್ ಮಾಡಲಾಗಿರುವುದನ್ನು ಪರಿಶೀಲನೆ ಮಾಡಲಾಗುತ್ತದೆ. ಸ್ಥಳೀಯ ಖರೀದಿದಾರರಿಗೆ ಮಾತ್ರ ಬಿಡ್ಡಿಂಗ್ನಲ್ಲಿ ಅವಕಾಶ ನೀಡಲು ಈ ವಿಧಾನ ಅನುಸರಿಸಲಾಗುವುದು. ನಿರ್ದಿಷ್ಟ ರಾಜ್ಯದಲ್ಲಿ ನೀಡಲಾದ ಸ್ಟಾಕ್‌ಗಳಿಗೆ ವ್ಯಾಪಕ ಸ್ಥಳೀಯ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆಹಾರ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ದೇಶಾದ್ಯಂತ 457 ಡಿಪೋಗಳಿಂದ 1ನೇ ಇ-ಹರಾಜಿನಲ್ಲಿ ಸುಮಾರು 4 ಲಕ್ಷ ಟನ್ ಗೋಧಿಯನ್ನು ನೀಡಲಾಗುತ್ತಿದೆ. ಗೋಧಿಯ ಮೂಲ ಬೆಲೆಯನ್ನು ಹಿಂದಿನ ಮಟ್ಟದಲ್ಲಿ ಅಂದರೆ 100 ಕೆಜಿಗೆ 2150 ರೂ. ನಿಗದಿ ಮಾಡಲಾಗಿದೆ. ಅಕ್ಕಿಯ ಮೂಲ ಬೆಲೆ 100 ಕೆಜಿಗೆ 3100 ರೂ. ಆಗಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) ಅಡಿಯಲ್ಲಿ ಅಕ್ಕಿಗಾಗಿ ಇ-ಹರಾಜು ಜುಲೈ 5, 2023ರಂದು ಪ್ರಾರಂಭವಾಗುತ್ತದೆ.