ಕರ್ನಾಟಕ

karnataka

ETV Bharat / business

ಸಿಕ್ಕಾಪಟ್ಟೆ ಬಡ್ಡಿ ಪೀಕುವ 17 'ಸ್ಪೈ ಲೋನ್' ಆ್ಯಪ್​ ತೆಗೆದು ಹಾಕಿದ ಗೂಗಲ್ - ವೈಯಕ್ತಿಕ ಡೇಟಾ

Google removes spy loan apps: ಪ್ಲೇಸ್ಟೋರ್​ನಲ್ಲಿನ 17 ಸ್ಪೈ ಲೋನ್ ಆ್ಯಪ್​ಗಳನ್ನು ಗೂಗಲ್ ತೆಗೆದು ಹಾಕಿದೆ.

Such deceptive Android loan apps are named as 'SpyLoan apps'.
Such deceptive Android loan apps are named as 'SpyLoan apps'.

By ETV Bharat Karnataka Team

Published : Dec 6, 2023, 7:55 PM IST

ನವದೆಹಲಿ: ಮೇಲ್ನೋಟಕ್ಕೆ ನೈಜ ಪರ್ಸನಲ್ ಲೋನ್ ಆ್ಯಪ್​ಗಳಂತೆ ಕಾಣುವ 18 ವಂಚಕ ಆಂಡ್ರಾಯ್ಡ್ ಲೋನ್ ಆ್ಯಪ್​ಗಳನ್ನು ಸಂಶೋಧಕರು ಬುಧವಾರ ಪತ್ತೆ ಹಚ್ಚಿದ್ದಾರೆ. ಇವುಗಳ ಪೈಕಿ ಭಾರತ ಮತ್ತು ಇತರ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 17 ಅಪ್ಲಿಕೇಶನ್​ಗಳನ್ನು ಗೂಗಲ್ ತನ್ನ ಪ್ಲಾಟ್​ಫಾರ್ಮ್​ನಿಂದ ತೆಗೆದುಹಾಕಿದೆ.

ಇಸೆಟ್ ರಿಸರ್ಚ್ (ESET Research) ವರದಿಯ ಪ್ರಕಾರ, ಈ ಅಪ್ಲಿಕೇಶನ್​ಗಳನ್ನು ಗೂಗಲ್ ತೆಗೆದುಹಾಕುವ ಮುನ್ನ ಇವು ಗೂಗಲ್ ಪ್ಲೇ ಸ್ಟೋರ್​ನಲ್ಲಿ ಜಾಗತಿಕವಾಗಿ 12 ದಶಲಕ್ಷಕ್ಕೂ ಹೆಚ್ಚು ಬಾರಿ ಡೌನ್​ಲೋಡ್ ಮಾಡಲ್ಪಟ್ಟಿವೆ. ಇಂಥ ವಂಚಕ ಆಂಡ್ರಾಯ್ಡ್ ಲೋನ್ ಅಪ್ಲಿಕೇಶನ್​ಗಳನ್ನು 'ಸ್ಪೈ ಲೋನ್ ಅಪ್ಲಿಕೇಶನ್​ಗಳು' ಎಂದು ಕರೆಯಲಾಗುತ್ತದೆ.

"ಈ ದುರುದ್ದೇಶಪೂರಿತ ಆ್ಯಪ್​ಗಳು ಕಾನೂನುಬದ್ಧವಾಗಿ ಸಾಲ ನೀಡುವ ಆ್ಯಪ್​ಗಳ ಮೇಲೆ ಬಳಕೆದಾರರು ಇಟ್ಟಿರುವ ನಂಬಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತವೆ. ಜನರನ್ನು ಮೋಸಗೊಳಿಸಲು ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯಲು ಅತ್ಯಾಧುನಿಕ ತಂತ್ರಗಳನ್ನು ಇವು ಬಳಸುತ್ತವೆ" ಎಂದು ಇಎಸ್ಇಟಿ ಸಂಶೋಧಕ ಲುಕಾಸ್ ಸ್ಟೀಫನ್ಕೊ ಹೇಳಿದ್ದಾರೆ.

ವರದಿಯ ಪ್ರಕಾರ, ಈ ಅಪ್ಲಿಕೇಶನ್​ಗಳನ್ನು ಮುಖ್ಯವಾಗಿ ಮೆಕ್ಸಿಕೊ, ಇಂಡೋನೇಷ್ಯಾ, ಥಾಯ್ಲೆಂಡ್, ವಿಯೆಟ್ನಾಂ, ಭಾರತ, ಪಾಕಿಸ್ತಾನ, ಕೊಲಂಬಿಯಾ, ಪೆರು, ಫಿಲಿಪೈನ್ಸ್, ಈಜಿಪ್ಟ್, ಕೀನ್ಯಾ, ನೈಜೀರಿಯಾ ಮತ್ತು ಸಿಂಗಾಪುರದಲ್ಲಿ ಕುಳಿತ ಹ್ಯಾಕರ್​ಗಳು ನಿರ್ವಹಿಸುತ್ತಿದ್ದಾರೆ. ಡೇಟಾ ಕಳವು ಮತ್ತು ಬ್ಲ್ಯಾಕ್​ಮೇಲ್ ಮಾಡುವುದು ಮಾತ್ರವಲ್ಲದೆ ಈ ಆ್ಯಪ್​ಗಳು ಅಗಾಧ ಪ್ರಮಾಣದ ಬಡ್ಡಿಯನ್ನು ಗ್ರಾಹಕರಿಂದ ವಸೂಲು ಮಾಡುತ್ತವೆ.

ಈ ಆ್ಯಪ್​ಗಳು ನೀಡುವ ಸಾಲದ ಒಟ್ಟು ವಾರ್ಷಿಕ ಮರುಪಾವತಿಯು (total annual cost -TAC) ಅವು ಹೇಳಿದ್ದಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿರುತ್ತದೆ ಮತ್ತು ಸಾಲದ ಅವಧಿ ಹೇಳಿದ್ದಕ್ಕಿಂತ ತುಂಬಾ ಕಡಿಮೆಯಾಗಿರುತ್ತದೆ ಎಂದು ಈ ಆ್ಯಪ್​ಗಳ ಸಂತ್ರಸ್ತರು ಹೇಳಿದ್ದಾರೆ. ಕೆಲ ಸಂದರ್ಭಗಳಲ್ಲಿ, ಸಾಲಗಾರರು ತಮ್ಮ ಸಾಲಗಳನ್ನು ನಿಗದಿತ 91 ದಿನಗಳ ಬದಲು ಐದು ದಿನಗಳಲ್ಲಿ ಪಾವತಿಸುವಂತೆ ಒತ್ತಡ ಹೇರಲಾಗಿದೆ ಮತ್ತು ಸಾಲದ ಟಿಎಸಿ ಶೇಕಡಾ 160 ರಿಂದ 340 ರ ನಡುವೆ ಇತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸ್ಪೈ ಲೋನ್ ಆ್ಯಪ್​ಗಳು 2020ರಿಂದ ಕೆಲಸ ಮಾಡುತ್ತಿವೆ ಎಂಬುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.

ಬಳಕೆದಾರರು ಸ್ಪೈ ಲೋನ್ ಅಪ್ಲಿಕೇಶನ್ ಅನ್ನು ತಮ್ಮ ಫೋನಿನಲ್ಲಿ ಇನ್​ಸ್ಟಾಲ್ ಮಾಡುವಾಗ ಇವುಗಳು ವಿಧಿಸುವ ಷರತ್ತುಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ ಮತ್ತು ಪೋನ್​ನಲ್ಲಿನ ವೈಯಕ್ತಿಕ ಡೇಟಾಗೆ ಪ್ರವೇಶ ನೀಡಲು ಹಲವಾರು ಅನುಮತಿಗಳನ್ನು ನೀಡಬೇಕಾಗುತ್ತದೆ. ಈ ಅಪ್ಲಿಕೇಶನ್​ಗಳ ಗೌಪ್ಯತೆ ನೀತಿಗಳ ಪ್ರಕಾರ, ಆ ಅನುಮತಿಗಳನ್ನು ನೀಡದಿದ್ದರೆ ಸಾಲ ನಿರಾಕರಿಸಲಾಗುತ್ತದೆ. ಸಾಲದ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ಬಳಕೆದಾರರು ತಮ್ಮ ಸಂಪೂರ್ಣ ವೈಯಕ್ತಿಕ ಮಾಹಿತಿಯನ್ನು ಒದಗಿಸುವಂತೆ ಒತ್ತಾಯಿಸಲಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ವಿಶ್ವದ 15ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಗೌತಮ್ ಅದಾನಿ

ABOUT THE AUTHOR

...view details