ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಭೌತಿಕ ಚಿನ್ನಕ್ಕೆ ಹೋಲಿಸಿದರೆ ಚಿನ್ನದ ಇಟಿಎಫ್‌ಗಳು (exchange traded funds-ವಿನಿಮಯ ವಹಿವಾಟು ನಿಧಿಗಳು) ಹೂಡಿಕೆದಾರರಿಗೆ ಹೆಚ್ಚಿನ ಅನುಕೂಲಗಳನ್ನು ಒದಗಿಸುವ ಮೂಲಕ ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಹೆಚ್ಚಾಗುವಂತೆ ಮಾಡಿವೆ. ಚಿನ್ನವು ತನ್ನ ಭೌತಿಕ ರೂಪದಲ್ಲಿ ಶತಮಾನಗಳಿಂದ ಯಾವುದೇ ಆರ್ಥಿಕ ಬಿಕ್ಕಟ್ಟು ತಡೆದುಕೊಳ್ಳುವ ಸಾಮರ್ಥ್ಯ ಸಾಬೀತುಪಡಿಸಿದೆ. ಈಗ, ಅದರ ಡಿಜಿಟಲ್ ರೂಪದಲ್ಲಿ, ಎಲ್ಲ ವರ್ಗದ ಜನರಿಗೆ ವಿಶ್ವಾಸದಿಂದ ಹೂಡಿಕೆ ಮಾಡಲು ಹೆಚ್ಚಿನ ಅವಕಾಶಗಳನ್ನು ನೀಡುವ ಮೂಲಕ ಹಳದಿ ಲೋಹವು ಇನ್ನಷ್ಟು ಬಲಿಷ್ಠವಾಗಿ, ಆಕರ್ಷಕವಾಗಿ ಹೊರಹೊಮ್ಮುತ್ತಿದೆ.
ಹಬ್ಬದ ಆಚರಣೆಗಾಗಿ ಚಿನ್ನ ಖರೀದಿ:ಪ್ರತಿ ಶುಭ ಸಂದರ್ಭ ಅಥವಾ ಹಬ್ಬಕ್ಕೆ ಜನ ಚಿನ್ನ ಖರೀದಿಸುತ್ತಾರೆ. ಅದರ ಅಲಂಕಾರಿಕ ಮೌಲ್ಯದಿಂದ ಮತ್ತು ಯೋಗ್ಯ ಹೂಡಿಕೆಯ ಸಾಧನವಾಗಿರುವ ಇದು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಣದುಬ್ಬರವನ್ನು ತಡೆದುಕೊಳ್ಳುವ ಏಕೈಕ ಹೂಡಿಕೆ ಸಾಧನವಾಗಿ ಇಡೀ ಜಗತ್ತು ಚಿನ್ನವನ್ನು ನಂಬುತ್ತದೆ.
ಶ್ರೀಮಂತರು ಮಾತ್ರ ಬೆಲೆಬಾಳುವ ಲೋಹದಲ್ಲಿ ಹೂಡಿಕೆ ಮಾಡಬಹುದು ಎನ್ನುವ ದಿನಗಳು ಈಗಿಲ್ಲ. ಇತ್ತೀಚಿನ ದಿನಗಳಲ್ಲಿ ಸಂಸ್ಥೆಗಳು ಚಿನ್ನದ ಮೇಲೆ ಸಣ್ಣ ಹೂಡಿಕೆ ಮಾಡಲು ಅವಕಾಶಗಳನ್ನು ನೀಡುತ್ತಿವೆ. ಇದರ ಅಡಿ, ಚಿನ್ನದ ವಿನಿಮಯ ವಹಿವಾಟು ನಿಧಿಗಳು (ಚಿನ್ನದ ಇಟಿಎಫ್‌ಗಳು) ಉತ್ತಮ ಹೂಡಿಕೆ ಸಾಧನಗಳಾಗಿ ಹೊರಹೊಮ್ಮುತ್ತಿವೆ. ಇವುಗಳಲ್ಲಿ ಯಾವೆಲ್ಲ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ತಿಳಿದುಕೊಂಡರೆ ಅಗತ್ಯ ಬಂದಾಗ ನೀವೂ ಇದರಲ್ಲಿ ಹೂಡಿಕೆ ಮಾಡಬಹುದು.
ಅನಿಶ್ಚಿತತೆ ವೇಳೆ ಚಿನ್ನ ಬಲು ಉಪಕಾರಿ:ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಅನಿಶ್ಚಿತತೆಗಳನ್ನು ಮೀರಿ ನಿಲ್ಲಲು ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತವಾಗಿದೆ. ಹಳದಿ ಲೋಹವು ಹೇಗೆ ಸ್ಥಿರವಾಗಿ ನಿಂತಿದೆ ಮತ್ತು ಪ್ರತಿ ಬಿಕ್ಕಟ್ಟನ್ನು ತಡೆದುಕೊಳ್ಳುವ ಮೂಲಕ ಖಚಿತವಾದ ಆದಾಯವನ್ನು ನೀಡಿದ್ದು ಹೇಗೆ ಎಂಬುದನ್ನು ತಿಳಿಯಬೇಕಾದರೆ ಒಂದಿಷ್ಟು ಇತಿಹಾಸದತ್ತ ಕಣ್ಣು ಹಾಯಿಸಬೇಕು.
ದಶಕಗಳಿಂದ ಚಿನ್ನವು ಸಂಪತ್ತಿನ ಸಂಕೇತವಾಗಿ ಮತ್ತು ವಿಶ್ವಾಸಾರ್ಹ ಹೂಡಿಕೆಯಾಗಿ ಗುರುತಿಸಲ್ಪಟ್ಟಿದೆ. ಮತ್ತೊಂದು ಆಕರ್ಷಕ ವೈಶಿಷ್ಟ್ಯವೆಂದರೆ ಅದರ ಸುಲಭ ನಗದೀಕರಣ. ಚಿನ್ನವನ್ನು ಭದ್ರತೆಯಾಗಿ ಬಳಸಿಕೊಂಡು ನಾವು ಎಲ್ಲಿ ಬೇಕಾದರೂ ಸುಲಭವಾಗಿ ಸಾಲ ಪಡೆಯಬಹುದು. ಈ ಬಹು-ವಿಷಯ ಕಾರಣಗಳಿಂದಾಗಿ, ಜನರು ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ನೇರವಾಗಿ ಚಿನ್ನವನ್ನು ಖರೀದಿಸುವ ಮೂಲಕ ಮತ್ತು ಡಿಜಿಟಲ್ ಚಿನ್ನದ ಬಾಂಡ್‌ಗಳು ಅಥವಾ ಇಟಿಎಫ್‌ಗಳನ್ನು ಆಯ್ಕೆ ಮಾಡುವ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.
ಹೇಗೆಲ್ಲ ಚಿನ್ನದ ಮೇಲೆ ಹೂಡಿಕೆ ಮಾಡಬಹುದು:ಹೂಡಿಕೆ ಪೋರ್ಟ್‌ಫೋಲಿಯೊದಲ್ಲಿ ವೈವಿಧ್ಯತೆಯನ್ನು ಹುಡುಕುತ್ತಿರುವವರು ಮೊದಲು ಚಿನ್ನದ ಹೂಡಿಕೆಯತ್ತ ಗಮನಹರಿಸಬೇಕು. ಈಕ್ವಿಟಿಗಳು ದೀರ್ಘಾವಧಿಯ ಹೂಡಿಕೆಯ ಮೇಲೆ ಉತ್ತಮ ಆದಾಯ ನೀಡಬಹುದು. ಆದರೆ ಹೂಡಿಕೆದಾರರು ಒಂದೇ ರೀತಿಯ ಹೂಡಿಕೆಯನ್ನು ಆಯ್ಕೆ ಮಾಡುವುದು ಸೂಕ್ತವಲ್ಲ.