ಹೈದರಾಬಾದ್ :ಪ್ರತಿಯೊಬ್ಬರೂ ಸುಸ್ಥಿರ ಜೀವನ ಹೊಂದಲು ದುಡಿಮೆ ಮಾಡುತ್ತೇವೆ. ನಾವು ಕಷ್ಟಪಟ್ಟು ದುಡಿದ ಹಣವನ್ನು ಉಳಿತಾಯ ಮಾಡುವುದು ಮುಖ್ಯವಾಗುತ್ತದೆ. ಈ ರೀತಿ ನಾವು ಕಷ್ಟಪಟ್ಟು ಗಳಿಸಿದ ಹಣವನ್ನು ಉಳಿತಾಯ ಮಾಡಲು ತೆರಿಗೆ ಉಳಿತಾಯ ಯೋಜನೆ ಹೊಂದುವುದು ಪ್ರಮುಖ ಸಂಗತಿಯಾಗಿದೆ.
ತೆರಿಗೆ ಉಳಿತಾಯ ಮಾಡಲು ಸ್ಥಿರ ಠೇವಣಿಗಳು :ನಾವು ದುಡಿದ ಹಣವನ್ನು ವಿವಿಧ ರೀತಿಯಲ್ಲಿ ಉಳಿತಾಯ ಮಾಡಬಹುದು. ಪ್ರತಿಯೊಬ್ಬರೂ ಅವರಿಗೆ ಸೂಕ್ತವಾದ ವಿಭಿನ್ನ ಆಯ್ಕೆಗಳನ್ನು ಹೊಂದಲು ಇಲ್ಲಿ ಅವಕಾಶ ಇದೆ. ಇದರಲ್ಲಿ ಪ್ರಮುಖವಾಗಿ ತಮ್ಮ ಹಣದ ಸುರಕ್ಷತೆಯನ್ನು ಬಯಸುವವರು ಬ್ಯಾಂಕ್ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್ಬಿಎಫ್ಸಿ) ನೀಡುವ ತೆರಿಗೆ ಉಳಿತಾಯ ಸ್ಥಿರ ಠೇವಣಿ (ಎಫ್ಡಿ)ಗಳ ಮೊರೆ ಹೋಗಬಹುದು. ಇಲ್ಲಿ ಪ್ರತಿಯೊಬ್ಬರೂ ತಮ್ಮ ವಾರ್ಷಿಕ ಹಣಕಾಸು ಯೋಜನೆಗಳ ಪ್ರಮುಖ ಭಾಗವಾಗಿ ತೆರಿಗೆ ಉಳಿತಾಯವನ್ನು ಪರಿಗಣಿಸಬೇಕು.
ಸ್ಥಿರ ಠೇವಣಿಗಳ ಪ್ರಯೋಜನಗಳು :ಈ ಸ್ಥಿರ ಠೇವಣಿ (ಎಫ್ಡಿ) ಹೂಡಿಕೆಯಿಂದ ನಮಗೆ ಸಾಕಷ್ಟು ಪ್ರಯೋಜನಗಳಿವೆ. ಸ್ಥಿರ ಠೇವಣಿ ಹೊಂದುವುದರಿಂದ ನಮಗೆ ತೆರಿಗೆ ವಿನಾಯಿತಿ, ಹೂಡಿಕೆ ಮೊತ್ತದ ಸುರಕ್ಷತೆ ಮತ್ತು ಸ್ಥಿರವಾದ ಬಡ್ಡಿದರ ಮುಂತಾದ ಉಪಯೋಗಳಿವೆ. ನಾವು ಕಷ್ಟಪಟ್ಟು ಗಳಿಸಿದ ಹಣವನ್ನು ಹೂಡಿಕೆ ಮಾಡಲು ಬ್ಯಾಂಕ್ಗಳು ಕೊಡಮಾಡುವ ಈ ಎಫ್ಡಿಗಳನ್ನು ಸುರಕ್ಷಿತ ಯೋಜನೆಗಳೆಂದು ಪರಿಗಣಿಸಲಾಗುತ್ತದೆ. ಅನೇಕರು ಈ ರೀತಿ ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಿ ನಿರ್ದಿಷ್ಟ ಆದಾಯ ಮತ್ತು ಸುಮಾರು 7% ಬಡ್ಡಿ ದರಗಳಿಂದ ಆದಾಯ ಗಳಿಸುತ್ತಿದ್ದಾರೆ.
ನಿರ್ದಿಷ್ಟ ಮಿತಿಗಳ ಒಳಗೆ ತೆರಿಗೆ ವಿನಾಯಿತಿ :ಇನ್ನು ತೆರಿಗೆ ಉಳಿಸಲು ಬಯಸುವವರು ಪ್ರಸಕ್ತ ಹಣಕಾಸು ವರ್ಷ ಮುಗಿಯುವ ಮೊದಲು ಎಫ್ಡಿ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಇದರಿಂದ ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 80C ಅಡಿಯಲ್ಲಿ ನಿರ್ದಿಷ್ಟ ಮಿತಿಗಳವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಇದು ವಿವಿಧ ತೆರಿಗೆ ಉಳಿತಾಯ ಯೋಜನೆಗಳಲ್ಲಿ ಮಾಡಿದ ಹೂಡಿಕೆಯ ಮೇಲೆ 1,50,000 ರೂ.ವರೆಗೆ ತೆರಿಗೆ ವಿನಾಯಿತಿಯನ್ನು ನೀಡುತ್ತದೆ.