ನವದೆಹಲಿ: 2023 ರಲ್ಲಿ ಜಾಗತಿಕ ಬೆಳವಣಿಗೆ ದರವು ಶೇಕಡಾ 3.0 ರಷ್ಟು ನಿಧಾನಗತಿಯಲ್ಲಿ ಉಳಿಯುವ ನಿರೀಕ್ಷೆಯಿದೆ ಮತ್ತು 2024 ರಲ್ಲಿ ಶೇಕಡಾ 2.9 ಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ. ಐಎಂಎಫ್ ವರದಿಯ ಪ್ರಕಾರ, ಇತ್ತೀಚಿನ ವಿಶ್ವ ಆರ್ಥಿಕ ದೃಷ್ಟಿಕೋನದಲ್ಲಿ ಬಹಿರಂಗಪಡಿಸಲಾದ ಈ ಮುನ್ಸೂಚನೆಯು ದಶಕಗಳಲ್ಲಿ ಅತ್ಯಂತ ಕಡಿಮೆ ಬೆಳವಣಿಗೆಯ ದರಗಳಲ್ಲಿ ಒಂದಾಗಿದೆ. ಜಾಗತಿಕ ಆರ್ಥಿಕತೆಯು ಹಲವಾರು ಬಿಕ್ಕಟ್ಟುಗಳು ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದೆ.
IMF ಹೇಳಿರುವುದಿಷ್ಟು:ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಐಎಂಎಫ್, "ಜಾಗತಿಕ ಬೆಳವಣಿಗೆಯು 2023 ರಲ್ಲಿ ಶೇಕಡಾ 3.0 ರಷ್ಟು ಮತ್ತು 2024 ರಲ್ಲಿ ಶೇಕಡಾ 2.9 ರಷ್ಟು ನಿಧಾನಗತಿಯಲ್ಲಿರುತ್ತದೆ. ಜಾಗತಿಕ ಆರ್ಥಿಕತೆಯು ಅನೇಕ ಸಂಕಷ್ಟಗಳು ಮತ್ತು ಜೀವನ ವೆಚ್ಚ ಹೆಚ್ಚಳದ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಬೆಳವಣಿಗೆಯ ಮುನ್ಸೂಚನೆ ದಶಕಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ವಿಶ್ವ ಆರ್ಥಿಕ ದೃಷ್ಟಿಕೋನದಲ್ಲಿ ಈ ಬಗ್ಗೆ ಮತ್ತಷ್ಟು ಮಾಹಿತಿ ಇದೆ. ಅಕ್ಟೋಬರ್ 2023 ರ ಐಎಂಎಫ್ನ "ನ್ಯಾವಿಗೇಟಿಂಗ್ ಗ್ಲೋಬಲ್ ಡೈವರ್ಜೆನ್ಸ್" ವರದಿಯು ಜಾಗತಿಕ ಮಟ್ಟದಲ್ಲಿ ಆರ್ಥಿಕ ಚೇತರಿಕೆಯನ್ನು ಸಾಧಿಸುವಲ್ಲಿ ಜಗತ್ತು ಎದುರಿಸುತ್ತಿರುವ ಸವಾಲುಗಳನ್ನು ತಿಳಿಸಿದೆ." ಎಂದು ಹೇಳಿದೆ.
ಜಾಗತಿಕ ಬೆಳವಣಿಗೆಯು 2022 ರಲ್ಲಿ ಶೇಕಡಾ 3.5 ರಿಂದ 2023 ರಲ್ಲಿ ಶೇಕಡಾ 3.0 ಕ್ಕೆ ಮತ್ತು 2024 ರಲ್ಲಿ ಶೇಕಡಾ 2.9 ಕ್ಕೆ ಇಳಿಯುತ್ತದೆ ಎಂದು ಬೇಸ್ಲೈನ್ ಮುನ್ಸೂಚನೆ ಹೇಳಿದೆ. ಇದು 2000 ಮತ್ತು 2019 ರ ನಡುವೆ ದಾಖಲಾದ ಐತಿಹಾಸಿಕ ಸರಾಸರಿ ಶೇಕಡಾ 3.8 ಕ್ಕಿಂತ ಗಮನಾರ್ಹ ಕುಸಿತವಾಗಿದೆ. ಮುಂದುವರಿದ ಆರ್ಥಿಕತೆಗಳು ಸಹ ಕುಸಿತ ಅನುಭವಿಸುವ ನಿರೀಕ್ಷೆಯಿದೆ. ಇದು 2022 ರಲ್ಲಿ ಶೇಕಡಾ 2.6 ರಷ್ಟು ಬೆಳವಣಿಗೆಯಿಂದ 2023 ರಲ್ಲಿ ಶೇಕಡಾ 1.5 ಕ್ಕೆ ಮತ್ತು 2024 ರಲ್ಲಿ ಶೇಕಡಾ 1.4 ಕ್ಕೆ ಕುಸಿಯಬಹುದು.